ಲಸಿಕೆ ನೀಡಲು ಮನೆಬಾಗಿಲಿಗೆ ಬಂದ ಆರೋಗ್ಯ ಸಿಬ್ಬಂದಿಗೆ ಶಾಕ್ ಕೊಟ್ಟ ಮಹಿಳೆ; ಸಹಾಯಕ್ಕೆ ಅಕ್ಕಪಕ್ಕದವರನ್ನು ಕರೆದ ಕಾರ್ಯಕರ್ತರು
ಕಮಲಾದೇವಿಗೆ ಎಷ್ಟು ಹೇಳಿದರೂ ಆಕೆ ಕೇಳದೆ ಹಾವನ್ನು ತೋರಿಸಿದಾಗ ಹೆದರಿದ ವೈದ್ಯಕೀಯ ಸಿಬ್ಬಂದಿ ತಮಗೆ ಸಹಾಯ ಮಾಡುವಂತೆ ಸ್ಥಳೀಯರನ್ನು ಕೇಳಿಕೊಂಡಿದ್ದಾರೆ. ನಂತರ ಇನ್ನೂ ಕೆಲವರು ಬಂದು ಎಲ್ಲರೂ ಸೇರಿ ಕಮಲಾ ದೇವಿಯಲ್ಲಿ ತಿಳಿವಳಿಕೆ ಮೂಡಿಸಿದರು.
ದೇಶದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ (Covid 19 Vaccination) ಅತ್ಯಂತ ವೇಗವಾಗಿ, ಯಶಸ್ವಿಯಾಗಿ ನಡೆಯುತ್ತಿದೆ ಎಂಬುದೇನೋ ಸತ್ಯ. ಆದರೂ ಕೆಲವು ಪ್ರದೇಶಗಳ ಹಿರಿಯ ನಾಗರಿಕರು ಕೊವಿಡ್ 19 ಲಸಿಕೆ (Covid 19 Vaccine) ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅವರನ್ನು ಮನವೊಲಿಸಿ ಕೊರೊನಾ ಲಸಿಕೆ ಹಾಕುವುದು ಆರೋಗ್ಯ ಸಿಬ್ಬಂದಿ, ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂಥದ್ದೇ ಒಂದು ಘಟನೆಯೀಗ ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದಿದೆ. ಇಲ್ಲಿನ ಹಳ್ಳಿಯೊಂದಕ್ಕೆ ಕೊವಿಡ್ 19 ಲಸಿಕೆ ಹಿಡಿದು ಬಂದ ಆರೋಗ್ಯ ಸಿಬ್ಬಂದಿಯನ್ನು ಹಿರಿಯ ಮಹಿಳೆಯೊಬ್ಬರು ಹಾವು ತೋರಿಸಿ ಹೆದರಿಸಿದ್ದಾರೆ.
ಅಜ್ಮೇರ್ ಜಿಲ್ಲೆಯ ಪಿಸಂಗನ್ನ ನಾಗೇಲಾವ್ ಗ್ರಾಮದಲ್ಲಿ ಹೀಗೊಂದು ವಿಚಿತ್ರ ಸನ್ನಿವೇಶ ಆರೋಗ್ಯ ಸಿಬ್ಬಂದಿಗೆ ಎದುರಾಗಿತ್ತು. ಅಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಅದರಂತೆ ಒಂದು ಮನೆಯ ಬಾಗಿಲಲ್ಲಿ ನಿಂತ ಅವರಿಗೆ ಅಕ್ಷರಶಃ ಶಾಕ್ ಕಾದಿತ್ತು. ಆ ಮನೆಯ ಮಹಿಳೆ ಕಮಲಾ ದೇವಿ ಕೈಯಲ್ಲೊಂದು ಚಿಕ್ಕ ಬುಟ್ಟಿ ಹಿಡಿದಿದ್ದರು..ಅದರಲ್ಲಿ ನಾಗರಹಾವು ಹೆಡೆಬಿಚ್ಚಿ ಕುಳಿತಿತ್ತು. ನನಗೆ ಲಸಿಕೆ ಬೇಡ..ಲಸಿಕೆ ಹಾಕಲು ಮುಂದೆ ಬಂದರೆ ನಿಮ್ಮ ಮೇಲೆ ಹಾವನ್ನು ಬಿಡುತ್ತೇನೆ ಎಂದು ಅವರು ಹೆದರಿಸುತ್ತಿದ್ದರು.
ಕಮಲಾದೇವಿ ಕಲ್ಬೇಲಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಹಾವು ಹಿಡಿಯುವುದು, ಅದನ್ನು ನಿಯಂತ್ರಿಸಿ, ಆಟ ಆಡಿಸುವುದು ಇವರ ಕಸುಬಾಗಿದೆ. ಆದರೆ ಆ ಹಾವನ್ನು ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರ ವಿರುದ್ಧ ಶಸ್ತ್ರವಾಗಿ ಆಕೆ ಬಳಸಿದ್ದಾಳೆ. ಇನ್ನು ವೈದ್ಯಕೀಯ ಸಿಬ್ಬಂದಿ ಕೊರೊನಾ ಲಸಿಕೆಯ ಮಹತ್ವ, ಅದರಿಂದ ಏನೂ ಅಪಾಯವಿಲ್ಲ ಎಂದು ಹೇಳಿ ಆಕೆಯನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಈ ವಿಡಿಯೋ ಕೂಡ ವೈರಲ್ ಆಗಿದೆ.
ಸಹಾಯಕ್ಕೆ ಕರೆದ ಆರೋಗ್ಯ ಸಿಬ್ಬಂದಿ ಕಮಲಾದೇವಿಗೆ ಎಷ್ಟು ಹೇಳಿದರೂ ಆಕೆ ಕೇಳದೆ ಹಾವನ್ನು ತೋರಿಸಿದಾಗ ಹೆದರಿದ ವೈದ್ಯಕೀಯ ಸಿಬ್ಬಂದಿ ತಮಗೆ ಸಹಾಯ ಮಾಡುವಂತೆ ಸ್ಥಳೀಯರನ್ನು ಕೇಳಿಕೊಂಡಿದ್ದಾರೆ. ನಂತರ ಇನ್ನೂ ಕೆಲವರು ಬಂದು ಎಲ್ಲರೂ ಸೇರಿ ಕಮಲಾ ದೇವಿಯಲ್ಲಿ ತಿಳಿವಳಿಕೆ ಮೂಡಿಸಿದರು. ಬಳಿಕ ಅವರು ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಕಮಲಾ ದೇವಿ ಜತೆ ಇನ್ನೂ 20 ಮಂದಿ ತಮಗೆ ಲಸಿಕೆ ಬೇಡ ಎನ್ನುತ್ತಿದ್ದರು. ಆದರೆ ಈಕೆ ವ್ಯಾಕ್ಸಿನ್ ಪಡೆಯುತ್ತಿದ್ದಂತೆ ಅವರೂ ಕೂಡ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ನ ಫಂಡ್ ಮ್ಯಾನೇಜರ್ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್ಗಳಿದ್ದಂತೆ: ಡಾ ಬಾಲಾಜಿ ರಾವ್