ತಿರುವನಂತಪುರಂ: ಕೇರಳದ (Kerala) ವಿಝಿಞಂ ಬಂದರಿನ (Vizhinjam port) ವಿರುದ್ಧ ನಡೆದು ಬರುತ್ತಿದ್ದ ಮುಷ್ಕರ ಹಿಂಪಡೆಯಲಾಗಿದೆ. ಮಂಗಳವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಜತೆ ನಡೆದ ಚರ್ಚೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯಕ್ಕೆ ಧರಣಿ ನಿಲ್ಲಿಸುವುದಾಗಿ ಹೋರಾಟ ಸಮಿತಿ ಘೋಷಿಸಿದೆ. ಅದೇ ವೇಳೆ ಬಂದರು ನಿರ್ಮಾಣ ನಿಲ್ಲಿಸುವುದಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ವಿಝಿಞಂ ಬಂದರು ನಿರ್ಮಾಣದ ವಿರುದ್ಧ 138 ದಿನಗಳ ಸುದೀರ್ಘ ಪ್ರತಿಭಟನೆ ಸದ್ಯಕ್ಕೆ ಹಿಂಪಡೆಯಲಾಗಿದೆ ಎಂದು ಆಂದೋಲನದ ನಾಯಕರು ಹೇಳಿದ್ದಾರೆ .ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಲಾಗಿದೆ ಎಂದು ಫಾದರ್ ಯುಜಿನ್ ಪೆರೇರಾ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ. ಜನರಿಗೆ ಕರಾವಳಿ ಸವೆತ ಮತ್ತು ಯೋಜನೆಯ ಪರಿಣಾಮಗಳ ಬಗ್ಗೆ ಸಾಕಷ್ಟು ಅರಿವಿಲ್ಲ. ಅಧ್ಯಯನ ನಡೆಸಿ ಪರಿಣಾಮಗಳನ್ನು ಅರಿತುಕೊಂಡರೆ ಮುಷ್ಕರವನ್ನು ಮುಂದಕ್ಕೆ ಕೊಂಡೊಯ್ಯಲಾಗುವುದು ಎಂದು ಫಾದರ್ ಯುಜೀನ್ ಪೆರೇರಾ ಹೇಳಿದ್ದಾರೆ.
ಮುಷ್ಕರದ 139ನೇ ದಿನದಂದು(ಮಂಗಳವಾರ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಬುಧವಾರ ಅದಾನಿ ಗ್ರೂಪ್ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಲಿದ್ದು, ಅದಕ್ಕಿಂತ ಮುಂಚೆ ಮುಷ್ಕರ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬಂದರು ನಿರ್ಮಾಣ ನಿಲ್ಲಿಸಬೇಕೆಂಬ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಆದರೆ ಮನೆ ಕಳೆದುಕೊಂಡವರಿಗೆ ಸರ್ಕಾರ 5,500 ರೂ.ಬಾಡಿಗೆ ನೀಡಲಿದೆ. ಧರಣಿ ನಿರತರು 8 ಸಾವಿರ ರೂ ನೀಡಬೇಕೆಂದು ಬೇಡಿಕೆಯೊಡ್ಡಿದ್ದಾರೆ. ಅದೇ ವೇಳೆ ಅಧ್ಯಯನ ಸಮಿತಿಯಲ್ಲಿ ಸ್ಥಳೀಯ ಪ್ರತಿನಿಧಿ ಇರಬೇಕೆಂಬ ಬೇಡಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ
ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಮೀನುಗಾರ ಸಮುದಾಯದ ಕಲ್ಯಾಣ ಕ್ರಮಗಳ ಅನುಷ್ಠಾನವನ್ನು ಪರಿಶೀಲಿಸುತ್ತದೆ. ಕರಾವಳಿ ಸವೆತ ನಿರಾಶ್ರಿತರಾದ ಕುಟುಂಬಗಳಿಗೆ ಬಾಡಿಗೆಯನ್ನು 5500 ರೂ.ಗಳಿಂದ ಹೆಚ್ಚಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಹೆಚ್ಚುವರಿಯಾಗಿ 2500 ರೂ.ಗಳನ್ನು ಅದಾನಿ ಗ್ರೂಪ್‌ನ ಸಿಎಸ್‌ಆರ್ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದಾಗ ನಾವು ನಿರಾಕರಿಸಿದ್ದೇವೆ. ತಜ್ಞರ ಸಮಿತಿಯಲ್ಲಿ ಸ್ಥಳೀಯ ಪ್ರತಿನಿಧಿಯನ್ನು ಸೇರಿಸಬೇಕೆಂಬ ಪ್ರತಿಭಟನಾಕಾರರ ಬೇಡಿಕೆಯನ್ನು ಸರ್ಕಾರವೂ ಒಪ್ಪಲಿಲ್ಲ. ಆದಾಗ್ಯೂ, ತಜ್ಞರ ಸಮಿತಿಯು ತಮ್ಮ ಅಭಿಪ್ರಾಯಗಳನ್ನು ಸೇರಿಸಲು ಪ್ರತಿಭಟನಾ ಸಮಿತಿಯನ್ನು ಭೇಟಿ ಮಾಡುತ್ತದೆ. ತಜ್ಞ ಸಮಿತಿಯು ರಚನೆಯಾಗಿ ನಾಲ್ಕು ವಾರಗಳ ನಂತರವೂ ಅದರ ಉಲ್ಲೇಖದ ನಿಯಮಗಳ ಬಗ್ಗೆ ಸರ್ಕಾರ ನಿರ್ಧರಿಸಿಲ್ಲ. ಏತನ್ಮಧ್ಯೆ, ಕರಾವಳಿ ಪ್ರದೇಶದ ಮೇಲೆ ನಿರ್ಮಾಣದ ಪರಿಣಾಮಗಳ ಅಧ್ಯಯನಕ್ಕಾಗಿ ನಾವು ಏಳು ಸದಸ್ಯರ ಸಮಿತಿಯನ್ನು ನೇಮಿಸಿದ್ದೇವೆ ಎಂದು ಫಾದರ್ ಪಿರೇರಾ ಹೇಳಿದರು.
ಪಾದ್ರಿ ಸೇರಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಪ್ರತಿಭಟನಾ ಸಮಿತಿ ತಿಳಿಸಿದೆ. ಬುಧವಾರ ಬೆಳಿಗ್ಗೆ ಬಂದರಿನ ಮುಂಭಾಗದಲ್ಲಿರುವ ಡೇರೆಗಳನ್ನು ಕೆಡವುವುದಾಗಿ ಲ್ಯಾಟಿನ್ ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರದಂದು ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸುವುದಾಗಿ ಅದಾನಿ ಗ್ರೂಪ್ ತಿಳಿಸಿದೆ.
ಆಂದೋಲನವು ನವೆಂಬರ್ 27 ರಂದು ವಿಝಿಞಂ ಪೊಲೀಸ್ ಠಾಣೆಯ ವಿರುದ್ಧ ಗುಂಪು ದಾಳಿ ಸೇರಿದಂತೆ ಹಲವಾರು ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿದೆ.
ಕರಾವಳಿ ಸವೆತ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಮುಷ್ಕರ ಸಮಿತಿ ಹೇಳಿದೆ. ಮುಷ್ಕರ ಸಮಿತಿಯೊಂದಿಗೆ ಮುಖ್ಯ ಕಾರ್ಯದರ್ಶಿ ಹಾಗೂ ಸಚಿವ ಸಂಪುಟ ಉಪ ಸಮಿತಿ ಚರ್ಚೆ ನಡೆಸಿತು. ಇದಾದ ಬಳಿಕ ಪ್ರತಿಭಟನಾಕಾರರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Tue, 6 December 22