ಸೀಪೋರ್ಟ್ ವಿರೋಧಿ ಪ್ರತಿಭಟನಾಕಾರರಿಂದ ಪೊಲೀಸ್ ಠಾಣೆ ಮೇಲೆ ದಾಳಿ: 29 ಪೊಲೀಸರು ಆಸ್ಪತ್ರೆಗೆ ದಾಖಲು
ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಿದ ಹಿನ್ನೆಲೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನೇತೃತ್ವದ ಆಂದೋಲನಕಾರರ ಗುಂಪೊಂದು 29 ಪೊಲೀಸರ ಮೇಲೆ ಹಲ್ಲೆ ನಡೆಸಿದೆ.
ತಿರುವನಂತಪುರಂ: ಅದಾನಿ ಬಂದರು ನಿರ್ಮಾಣ (Adani port construction)ವನ್ನು ವಿರೋಧಿಸಿ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ (Latin Catholic Church) ನೇತೃತ್ವದ ಆಂದೋಲನಕಾರರ ಗುಂಪೊಂದು ಭಾನುವಾರ ರಾತ್ರಿ ವಿಜಿಂಜಾಂ ಪೊಲೀಸ್ ಠಾಣೆಯ (Vizhinjam Police Station) ಮೇಲೆ ದಾಳಿ ನಡೆಸಿ 29 ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಪೊಲೀಸ್ ವಾಹನಗಳನ್ನು ಕೂಡ ಕಿಡಿಗೇಡಿಗಳ ಗುಂಪು ಹಾನಿಗೊಳಿಸಿದೆ. ನವೆಂಬರ್ 26 ರಂದು ನಡೆದ ಹಿಂಸಾತ್ಮಕ ಪ್ರತಿಭಟನೆ (Violence protest)ಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ್ನು ಬಂಧಿಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದ ಬೆನ್ನಲ್ಲೆ ಕಿಡಿಗೇಡಿ ಜನಸಮೂಹವು ದೊಣ್ಣೆ ಮತ್ತು ಇಟ್ಟಿಗೆಗಳೊಂದಿಗೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತು. ಕನಿಷ್ಠ 29 ಪೊಲೀಸರು ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ವಿಶೇಷ ಶಾಖೆಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಈ ಪ್ರದೇಶದದಲ್ಲಿ ಇತರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಠಾಣೆ ಮೇಲೆರಗಿದ್ದಲ್ಲದೆ, ಅದೇ ಸಮೂಗದ ಜನರು ಸ್ಥಳದಲ್ಲಿದ್ದ ಮಾಧ್ಯಮದವರ ಮೇಲೂ ಹಲ್ಲೆ ನಡೆಸಿದ್ದಾರೆ. ಎಸಿವಿ ಸ್ಥಳೀಯ ಚಾನೆಲ್ ಕ್ಯಾಮರಾ ವ್ಯಕ್ತಿ ಶೆರಿಫ್ ಎಂ ಜಾನ್ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿ ಅವರ ಕ್ಯಾಮೆರಾವನ್ನು ಹಾನಿಗೊಳಿಸಿದ್ದಲ್ಲದೆ ಅವ ಮೊಬೈಲ್ ಅನ್ನು ಕಿತ್ತುಕೊಂಡಿದ್ದಾರೆ. ಗಾಯಗೊಂಡ ಶೆರಿಫ್ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು
ಏತನ್ಮಧ್ಯೆ, ಜಿಲ್ಲಾಡಳಿತವು ಚರ್ಚ್ ಅಧಿಕಾರಿಗಳೊಂದಿಗೆ ಶಾಂತಿ ಮಾತುಕತೆಯನ್ನು ಪ್ರಾರಂಭಿಸಿದೆ. ಈ ವೇಳೆ ಚರ್ಚ್ ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸುತ್ತದೆ ಎಂದು ಚರ್ಚ್ ಪ್ರತಿನಿಧಿ ಫಾದರ್ ಯುಜೀನ್ ಪೆರೆರಾ ಹೇಳಿದರು. ನಾವು ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತೇವೆ, ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಶನಿವಾರದಂದು ವಿಝಿಂಜಾಂನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಥಾಮಸ್ ಜೆ ನೆಟ್ಟೊ ಮತ್ತು ಪೆರೇರಾ ಸೇರಿದಂತೆ ಕನಿಷ್ಠ 15 ಲ್ಯಾಟಿನ್ ಕ್ಯಾಥೋಲಿಕ್ ಪಾದ್ರಿಗಳ ವಿರುದ್ಧ ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಧ್ವಂಸಗೊಂಡ ವಿಝಿಂಜಂ ಪೊಲೀಸ್ ಠಾಣೆಯ ದೃಶ್ಯಗಳನ್ನು ದೂರದರ್ಶನ ಚಾನೆಲ್‌ಗಳು ಪ್ರಸಾರ ಮಾಡಿದ್ದು, ಪೊಲೀಸ್ ವ್ಯಾನ್ ಮತ್ತು ಜೀಪ್‌ಗಳು ಸೇರಿದಂತೆ ವಾಹನಗಳನ್ನು ಹಾನಿಗೊಳಿಸಲಾಗಿತ್ತು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ