ಕೋಲ್ಕತ್ತದಲ್ಲಿ ನಿನ್ನೆಯಿಂದಲೂ ವಿಪರೀತ ಮಳೆ ಸುರಿಯುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಇಡೀ ಪಶ್ಚಿಮ ಬಂಗಾಳದಾದ್ಯಂತ ಗುಡುಗು-ಮಿಂಚು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕೋಲ್ಕತ್ತದಲ್ಲಿ ಬುಧವಾರದಿಂದಲೇ ನಿರಂತರವಾಗಿ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಇಂದು ಹಲವು ಪ್ರಮುಖ ಮತ್ತು ಕಾಲುದಾರಿಗಳೆಲ್ಲ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದು ಸಂಚಾರಕ್ಕೆ ತೀವ್ರ ತೊಡಕಾಗಿ ಪರಿಣಮಿಸಿದೆ.
ಕೋಲ್ಕತ್ತದ ಉತ್ತರ ಭಾಗಕ್ಕಿಂತ ದಕ್ಷಿಣದ ಭಾಗಗಳಲ್ಲಿ ತುಂಬ ಮಳೆ ಸುರಿಯುತ್ತಿದೆ. ಹೀಗಾಗಿ ಬ್ಯಾಲಿಗಂಜ್ ವೃತ್ತಾಕಾರದ ರಸ್ತೆ, ಲೌಡಾನ್ ಸ್ಟ್ರೀಟ್, ಸದರ್ನ್ ಅವೆನ್ಯೂ ಮತ್ತು ಕಾಸ್ಬಾ, ಬೆಹಾಲಾ ಮತ್ತು ಟೋಲಿಗಂಗೆಯ ಬಳಿಯೆಲ್ಲ ರಸ್ತೆಗಳು ನೀರಿನಿಂದ ತುಂಬಿ ಹೋಗಿವೆ. ಇನ್ನು ಇಂದಿನಿಂದ ಜೂ.19ರವರೆಗೂ ಪಶ್ಚಿಮಬಂಗಾಳದಲ್ಲಿ ಗುಡುಗುಮಿಂಚು ಸಹಿತ ವಿಪರೀತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೋಲ್ಕತ್ತದಲ್ಲಿ 24 ಗಂಟೆಯಲ್ಲಿ 144 ಮಿಮೀ ಮಳೆಯಾಗಿದೆ. ನಿರಂತರವಾದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಟ್ರಾಫಿಕ್ ಜಾಮ್ ಆಗಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಸಮುದ್ರದಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಹಾಗೇ, ಅತಿಯಾದ ಗುಡುಗು-ಮಿಂಚು ಕೂಡ ಇರುವದರಿಂದ ಜನರೂ ಸಹ ಆದಷ್ಟು ಮನೆಯೊಳಗೇ ಇರಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Viral video: ತಲೆ ಮೇಲೆ ಭಾರದ ಪಾತ್ರೆ ಬುಟ್ಟಿ ಹೊತ್ತು ನೀರಿನಲ್ಲಿ ಬೈಕ್ ಓಡಿಸಿದ ಮಹಿಳೆ! ಅದ್ಭುತ ಪ್ರತಿಭೆಗೆ ಪ್ರಶಂಸೆ
Kolkata and several parts of the West Bengal received incessant rain