ದೆಹಲಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್: ನರೇಂದ್ರ ಮೋದಿ ಭೇಟಿ ಸಾಧ್ಯತೆ
ಭೇಟಿಯ ವೇಳೆ 25 ವಿಶೇಷ ಬೇಡಿಕೆಯನ್ನು ಪ್ರಧಾನಿ ಎದುರು ಇಡಲು ಸ್ಟಾಲಿನ್ ಸಿದ್ಧತೆ ಮಾಡಿಕೊಂಡಿದ್ದಾರೆ. NEET ಪರೀಕ್ಷೆ, ಕೊವಿಡ್-19 ಲಸಿಕಾ ಅಭಿಯಾನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳ ಬಿಡುಗಡೆ ಬಗ್ಗೆ ಚರ್ಚೆ ನಡೆಯಬಹುದು.
ದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎರಡು ದಿನಗಳ ಭೇಟಿಗೆಂದು ದೆಹಲಿಗೆ ಗುರುವಾರ ಬಂದಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ನಿವಾಸದಲ್ಲಿಯೇ ಭೇಟಿಯಾಗುವ ಸಾಧ್ಯತೆಯಿದೆ. ಭೇಟಿಯ ವೇಳೆ 25 ವಿಶೇಷ ಬೇಡಿಕೆಯನ್ನು ಪ್ರಧಾನಿ ಎದುರು ಇಡಲು ಸ್ಟಾಲಿನ್ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
NEET ಪರೀಕ್ಷೆ, ಕೊವಿಡ್-19 ಲಸಿಕಾ ಅಭಿಯಾನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳ ಬಿಡುಗಡೆ, ಕಾವೇರಿ ವಿವಾದ ಸೇರಿದಂತೆ ಹಲವು ವಿಚಾರಗಳನ್ನು ಸ್ಟಾಲಿನ್ ಪ್ರಧಾನಿಯೊಂದಿಗೆ ಚರ್ಚಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸ್ಟಾಲಿನ್ ಇದೇ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿಯಾಗುತ್ತಿದ್ದಾರೆ.
ಎರಡು ದಿನಗಳ ಭೇಟಿಯ ವೇಳೆ ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನೂ ಭೇಟಿಯಾಗಲಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಡಿಎಂಕೆ ಪಕ್ಷದ ಕಚೇರಿ ನಿರ್ಮಾಣ ಕಾರ್ಯವನ್ನೂ ಪರಿಶೀಲಿಸಲಿದ್ದಾರೆ. ದೆಹಲಿಯ ತಮಿಳುನಾಡು ಹೌಸ್ನಲ್ಲಿ ತಂಗಲಿರುವ ಸ್ಟಾಲಿನ್ ಅವರನ್ನು ಡಿಎಂಕೆಯ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸ್ವಾಗತಿಸಲಿದ್ದಾರೆ.
ಮೋದಿ ಜೊತೆಗೆ ಸ್ಟಾಲಿನ್ ಚರ್ಚೆ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳ ಆಕಾಂಕ್ಷಿಗಳ ಮೇಲೆ NEET ಪರೀಕ್ಷೆಯ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ನಿರ್ದೇಶಿಸಿ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ರಾಜನ್ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಟಾಲಿನ್ ರಚಿಸಿದ್ದಾರೆ. ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿರುವ ಈ ಪರೀಕ್ಷೆಯನ್ನು ರದ್ದುಪಡಿಸಬೇಕು ಎನ್ನುವ ವಿಚಾರದಲ್ಲಿ ಪ್ರತಿಪಕ್ಷ ಎಐಎಡಿಎಂಕೆ ಸೇರಿದಂತೆ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳೂ ಒಮ್ಮತಕ್ಕೆ ಬಂದಿವೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಟಾಲಿನ್ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು. ಕಾವೇರಿ ಮುಖಜಭೂಮಿಯಲ್ಲಿ ಹೈಡ್ರೊಕಾರ್ಬನ್ ಮತ್ತು ನೈಸರ್ಗಿಕ ಅನಿಲ ತೆಗೆಯುವ ಪ್ರಯತ್ನಗಳನ್ನು ನಿಲ್ಲಿಸುವಂತೆ ಎಂದು ಪೆಟ್ರೋಲಿಯಂ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಪ್ರಧಾನಿಯನ್ನು ಸ್ಟಾಲಿನ್ ಕೋರಲಿದ್ದಾರೆ. ತಮಿಳುನಾಡಿನ ಆಹಾರ ಭದ್ರತೆ, ಕೃಷಿ ಆಧರಿತ ಅರ್ಥವ್ಯವಸ್ಥೆ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಕಾವೇರಿ ಮುಖಜಭೂಮಿಯೇ ಜೀವಾಧಾರವಾಗಿದೆ. ಅಲ್ಲಿನ ಪರಿಸರದಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ ತಮಿಳುನಾಡಿನ ಲಕ್ಷಾಂತರ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಸ್ಟಾಲಿನ್ ಹೇಳಿದ್ದರು.
ರಾಜೀವ್ ಗಾಂಧಿ ಹತ್ಯೆ ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸ್ಟಾಲಿನ್ ತಮ್ಮ ಭೇಟಿಯಲ್ಲಿ ಕೋರಲಿದ್ದಾರೆ. ಮೇ 20ರಂದು ಸ್ಟಾಲಿನ್ ಈ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು, ಶಿಕ್ಷ ಅನುಭವಿಸುತ್ತಿರುವ ಏಳು ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡಬೇಕೆಂದು ವಿನಂತಿಸಿದ್ದರು. 2018ರಲ್ಲಿ ಎಐಎಡಿಎಂಕೆ ಸರ್ಕಾರವು ರಾಜ್ಯಪಾಲರಿಗೆ ಈ ಸಂಬಂಧ ಪತ್ರಬರೆದು 7 ಮಂದಿಯನ್ನು ಬಿಡಗಡೆ ಮಾಡಲು ಕೋರಿತ್ತು. ಆದರೆ ಈ ಎರಡೂ ಪತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
(Tamil Nadu CM MK Stalin in Delhi He may meet Prime Minister Narendra Modi)
ಇದನ್ನೂ ಓದಿ: AIIMS ಯೋಜನೆ ತಡವಾಗುತ್ತಿದೆ; ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು: ಎಮ್ ಕೆ ಸ್ಟಾಲಿನ್
ಇದನ್ನು ಓದಿ: ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಲಿದೆ ತಮಿಳುನಾಡು: ಸಿಎಂ ಸ್ಟಾಲಿನ್