ಪತ್ತನಂತಿಟ್ಟದಲ್ಲಿ ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಂಧ್ರ ಬಸ್ ಅಪಘಾತ; ಸಮಯಪ್ರಜ್ಞೆ ಮೆರೆದು ಜನರ ಪ್ರಾಣ ಕಾಪಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ
ಆಂಧ್ರಪ್ರದೇಶದಿಂದ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಬ್ರೇಕ್ ಫೇಲ್ ಆಗಿದೆ. ಬಸ್ಸಿನೊಳಗಿಂದ ಕಿರುಚಾಟವನ್ನು ಕೇಳಿದ ಸ್ಮಿತೋಷ್ ಖಾಸಗಿ ಬಸ್ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿದ್ದು, ಡಿಕ್ಕಿ ಹೊಡೆದ ನಂತರ ಖಾಸಗಿ ಬಸ್ ನಿಂತಿದೆ.
ಕೋಟ್ಟಯಂ: ಬ್ರೇಕ್ ಫೇಲ್ ಆದ ಬಸ್ ಕಡಿದಾದ ರಸ್ತೆಯಲ್ಲಿ ಸಾಗುತ್ತಿತ್ತು. ಬಸ್ಸಿನಲ್ಲಿದ್ದ ಸುಮಾರು 60 ಶಬರಿಮಲೆ ಯಾತ್ರಿಕರು (Sabarimala pilgrims) ಇನ್ನೇನು ದುರಂತ ಕಣ್ಮುಂದೆಯೇ ನಡೆಯುತ್ತದೆ ಎಂದು ಹೇಗಾದರೂ ಕಾಪಾಡು ಎಂದು ದೇವರಲ್ಲಿ ಪ್ರಾರ್ಥಿಸಿದರು. ಅವರ ಪ್ರಾರ್ಥನೆ ಕೇಳಿಸಿತು ಎಂಬಂತೆ ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿ ಅವರನ್ನು ಸಾವಿನ ದವಡೆಯಿಂದ ಹೊರತೆಗೆದ ಘಟನೆ ವರದಿ ಆಗಿದೆ. ಆಲುವಾ ಮೂಲದ ಕೆಎಸ್‌ಆರ್‌ಟಿಸಿ (KSRTC )ಬಸ್ ಚಾಲಕ ಪಿ ಆರ್ ಸ್ಮಿತೋಷ್ (P R Smithosh) ಅನೇಕ ಜೀವಗಳನ್ನು ಉಳಿಸಿದ್ದು ಅವರ ಸಮಯ ಪ್ರಜ್ಞೆಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಆಂಧ್ರಪ್ರದೇಶದಿಂದ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಬ್ರೇಕ್ ಫೇಲ್ ಆಗಿದೆ. ಬಸ್ಸಿನೊಳಗಿಂದ ಕಿರುಚಾಟವನ್ನು ಕೇಳಿದ ಸ್ಮಿತೋಷ್ ಖಾಸಗಿ ಬಸ್ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿದ್ದು, ಡಿಕ್ಕಿ ಹೊಡೆದ ನಂತರ ಖಾಸಗಿ ಬಸ್ ನಿಂತಿದೆ. ಎರುಮೇಲಿ-ಪಂಪಾವಲ್ಲಿ-ಪಂಪಾ ರಸ್ತೆಯ ಕನಮಲ ಸೇತುವೆ ಬಳಿಯ ಅತ್ತಿವಾಳವ್ ಎಂಬಲ್ಲಿ ಈ ಘಟನೆ ನಡೆದಿದೆ.
ಆಲುವಾ ಡಿಪೋದಲ್ಲಿರುವ ಸ್ಮಿತೋಷ್ ಆಲುವಾದಿಂದ ಪಂಪಾಕ್ಕೆ ಹೋಗುವ ಬಸ್ ಚಾಲನೆ ಮಾಡುತ್ತಿದ್ದರು. ಆ ಹೊತ್ತಲ್ಲಿ ಅಲ್ಲಿ ಬಸ್ ನಿಲ್ಲಿಸದೇ ಇದ್ದಿದ್ದರೆ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಸ್ಮಿತೋಷ್ ಹೇಳಿದ್ದಾರೆ. ಬಸ್ ಮೇಲೆ ಹತ್ತುತ್ತಿದ್ದಂತೆ ನಮ್ಮ ಬಸ್ ಆಂಧ್ರ ಬಸ್ ಅನ್ನು ಹಿಂದಿಕ್ಕಿತು. ನನಗೆ ಕ್ಲಚ್ ಸುಡುತ್ತಿರುವ ವಾಸನೆ ಬಂತು. ನಮ್ಮ ಬಸ್ ಮೇಲೆ ತಲುಪಿದ ನಂತರ ಕನಮಲ ಸೇತುವೆಯ ಕಡೆಗೆ ಹೋಗುವಾಗ, ಆಂಧ್ರ ಬಸ್ ನಿರಂತರವಾಗಿ ಹಾರ್ನ್ ಹಾಕುತ್ತಿದ್ದು, ರಸ್ತೆಯ ಗುಂಡಿಯನ್ನು ಜಿಗಿದ ನಂತರ ನಮ್ಮ ಬಸ್ ಅನ್ನು ಸ್ವಲ್ಪ ಹಿಂದಕ್ಕೆ ಹಾಕಿತು.
ಆಗಲೇ ನನಗೆ ಜನರ ಕಿರುಚಾಟ ಕೇಳಿಸಿದ್ದು. ನಾನು ಅಪಾಯವನ್ನು ಗ್ರಹಿಸಿದೆ ಮತ್ತು ಹಿಂದಿನ ಸೀಟಿನಲ್ಲಿ ಯಾವುದೇ ಪ್ರಯಾಣಿಕರಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಂಡಕ್ಟರ್ ಎಂ ವಿ ರಾಜೀವ್ ಅವರಿಗೆ ಹೇಳಿದೆ. ನಂತರ ನಾನು ನಮ್ಮ ಬಸ್ ಅನ್ನು ನಿಲ್ಲಿಸಲು ಹ್ಯಾಂಡ್‌ಬ್ರೇಕ್ ಹಾಕಿದ್ದು ಮತ್ತೊಂದು ಬಸ್ ನಮ್ಮ ವಾಹನದ ಹಿಂಬಾಗಕ್ಕೆ ತಾಗಲು ಅವಕಾಶ ಮಾಡಿಕೊಟ್ಟೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 42 ಮಂದಿ ಪ್ರಯಾಣಿಕರಿದ್ದು, ಇನ್ನೊಂದು ವಾಹನದಲ್ಲಿಯೂ ಸಿಕ್ಕಾಪಟ್ಟೆ ಜನ ಇದ್ದ ಕಾರಣ ದಿಢೀರ್ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು ಎಂದು ಸ್ಮಿತೋಷ್ ಹೇಳಿದ್ದಾರೆ. ಒಂದು ವೇಳೆ ಕೆಎಸ್‌ಆರ್‌ಟಿಸಿ ಬಸ್ ಇನ್ನೊಂದು ವಾಹನವನ್ನು ನಿಲ್ಲಿಸಲು ವಿಫಲವಾಗುತ್ತಿದ್ದೆ ಇಬ್ಬರೂ ಕಮರಿಗೆ ಬೀಳುತ್ತಿದ್ದರು ಎಂದ ಸ್ಮಿತೋಷ್, ನಾನು ಹೇಗೆ ನಿರ್ಧಾರ ತೆಗೆದುಕೊಂಡೆ ಎಂದು ನನಗೆ ತಿಳಿದಿಲ್ಲ. ಇದು ದೇವರ ನಿರ್ಧಾರವಾಗಿರಬಹುದು ಎಂದಿದ್ದಾರೆ.
ಬಸ್ ನಿಲ್ಲಿಸಿದ ನಂತರ, ಬಸ್ಸಿನಲ್ಲಿದ್ದ ಬಹುತೇಕ ಎಲ್ಲಾ ಯಾತ್ರಾರ್ಥಿಗಳು ಸ್ಮಿತೋಷ್ ಬಳಿಗೆ ಬಂದು ಧನ್ಯವಾದಗಳನ್ನು ಅರ್ಪಿಸಿದರು. ಅವರ ಭಾವನೆಗಳನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಅವರ ಮುಖಭಾವ ನೋಡಿದರೆ ಅವರು ಅಯ್ಯಪ್ಪನನ್ನು ನೋಡಿದಂತೆಯೇ ಇತ್ತು ಎಂದು ಸ್ಮಿತೋಷ್ ಹೇಳಿದ್ದಾರೆ.
ರಸ್ತೆಯಲ್ಲಿ ಘರ್ಷಣೆಯು ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿದ್ದು ಮೋಟಾರು ವಾಹನ ಇಲಾಖೆ (MVD) ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಇದು ಸಾಮಾನ್ಯ ಅಪಘಾತ ಎಂದು ಕಂಡು, ಎಂವಿಡಿ ಅಧಿಕಾರಿಗಳು ಸಂಚಾರವನ್ನು ಪುನಃಸ್ಥಾಪಿಸಲು KSRTC ಬಸ್ ಅನ್ನು ರಸ್ತೆ ಬದಿಗೆ ಸರಿಸಲು ಸ್ಮಿತೋಷ್‌ಗೆ ಹೇಳಿದರು. ಈ ಹೊತ್ತಲ್ಲಿ ಸ್ಮಿತೋಷ್ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು ಆಂಧ್ರ ಬಸ್‌ನ ಬ್ರೇಕ್ ಫೇಲಾಗಿದೆ ಕೆಎಸ್‌ಆರ್‌ಟಿಸಿ ಬಸ್ ಅನ್ನು ಸ್ಥಳದಿಂದ ತೆಗೆದರೆ ಅದು ಕೆಳಕ್ಕೆ ಚಲಿಸುತ್ತದೆ ಎಂದು ಸ್ಮಿತೋಷ್ ಹೇಳಿದ್ದಾರೆ.
“ತಗ್ಗು ಪ್ರದೇಶದಲ್ಲಿ ಹಲವಾರು ವಾಹನಗಳನ್ನು ನಿಲ್ಲಿಸಲಾಗಿದ್ದು ಜನರು ಅವುಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಾನು ಕೆಎಸ್‌ಆರ್‌ಟಿಸಿ ಬಸ್ಸನ್ನು ಸರಿಸಿದ್ದರೆ ಯಾತ್ರಾರ್ಥಿಗಳ ಬಸ್ ಕೆಳಗೆ ಜಾರಿ ತಗ್ಗು ಪ್ರದೇಶದಲ್ಲಿದ್ದ ವಾಹನಗಳ ಮೇಲೆ ಉರುಳುತ್ತಿತ್ತು ಎಂದು ಸ್ಮಿತೋಷ್ ಹೇಳಿದ್ದಾರೆ.
ಲಾಹಾದಲ್ಲಿ ಶಬರಿಮಲೆ ಯಾತ್ರಿಕರು ಪ್ರಯಾಣಿಸುತ್ತಿದ್ದ ಆಂದ್ರ ಬಸ್ ಅಪಘಾತ: 43 ಮಂದಿಗೆ ಗಾಯ
ಪತ್ತನಂತಿಟ್ಟ: ಆಂಧ್ರಪ್ರದೇಶದಿಂದ 44 ಶಬರಿಮಲೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಶನಿವಾರ( ನವೆಂಬರ್ 19) ಬೆಳಗ್ಗೆ 7.30ಕ್ಕೆ ಲಾಹಾದಲ್ಲಿ ಅಪಘಾತಕ್ಕೀಡಾಗಿದ್ದು 43 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 5 ಮಂದಿಯನ್ನು ಕೋಟ್ಟಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ವರ್ಷದ ಬಾಲಕ ಮಣಿಕಂಠನ್ ಗೆ ಹಲವು ಗಾಯಗಳಾಗಿದ್ದು, ಕೊಟ್ಟಾಯಂ ಎಂಸಿಎಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.