ಜನರಿಗೆ ಕಾನೂನಿನ ಭಯವಿಲ್ಲ; ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ನಿತಿನ್ ಗಡ್ಕರಿ ಕಳವಳ

|

Updated on: Dec 20, 2023 | 9:01 PM

2021 ಕ್ಕೆ ಹೋಲಿಸಿದರೆ 2022 ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ 11.9% ಹೆಚ್ಚಾಗಿದೆ. ರಸ್ತೆ ಅಪಘಾತಗಳ ಖಾತೆಯಲ್ಲಿ ಸಾವು ಮತ್ತು ಗಾಯಗಳ ಸಂಖ್ಯೆ 9.4% ಹೆಚ್ಚಾಗಿದೆ ಎಂದು ಗಡ್ಕರಿ ಹೇಳಿದರು. 2022 ರಲ್ಲಿ ದೇಶದಲ್ಲಿ ಒಟ್ಟು ರಸ್ತೆ ಅಪಘಾತಗಳು ಮತ್ತು ಸಾವುಗಳು ಕ್ರಮವಾಗಿ 4,61,312 ಮತ್ತು 1,68,491 ಎಂದು ವರದಿಯಾಗಿದೆ ಎಂದು ಸಂಸತ್ತಿಗೆ ನಿತಿನ್ ಗಡ್ಕರಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ

ಜನರಿಗೆ ಕಾನೂನಿನ ಭಯವಿಲ್ಲ; ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ನಿತಿನ್ ಗಡ್ಕರಿ ಕಳವಳ
ನಿತಿನ್ ಗಡ್ಕರಿ
Follow us on

ದೆಹಲಿ ಡಿಸೆಂಬರ್ 20:  ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ (Road Accident) ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) “ಕಾನೂನಿನ ಭಯದ ಕೊರತೆ”ಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಮಿತಿಮೀರಿದ ವೇಗದಿಂದಾಗಿ ಬಹಳಷ್ಟು ಅಪಘಾತಗಳು ಸಂಭವಿಸುತ್ತವೆ. ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಮತ್ತು ಅನಾವಶ್ಯಕ ಪ್ರಾಣಹಾನಿಯನ್ನು ತಡೆಯಲು ಸಂಚಾರ ನಿಯಮಗಳ ಉಲ್ಲಂಘನೆಯ ಬಗ್ಗೆ ಜನರ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯತೆಗಾಗಿ ಲೇನ್ ಶಿಸ್ತು ಬಹಳ ಮುಖ್ಯ ಎಂದು ಗಡ್ಕರಿ ಹೇಳಿದರು.

ಸಾರ್ವಜನಿಕ ಮನಸ್ಸಿನಲ್ಲಿ, ಕಾನೂನಿನ ಬಗ್ಗೆ ಯಾವುದೇ ಭಯ ಅಥವಾ ಗೌರವವಿಲ್ಲ. ನಮಗೆ ಮಧ್ಯಸ್ಥಗಾರರು ಮತ್ತು ಶಿಕ್ಷಣ ಸಂಸ್ಥೆಗಳಿಂದ ಸಹಕಾರ ಬೇಕು. 2030 ರ ಮೊದಲು ಅಪಘಾತ ಸಾವಿನ ಪ್ರಮಾಣವನ್ನು 50% ರಷ್ಟು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು  ಗಡ್ಕರಿ ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.

ಸಚಿವಾಲಯವು ಅಕ್ಟೋಬರ್‌ನಲ್ಲಿ Road Accidents in India-2022 ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿತ್ತು, ಅಲ್ಲಿ ಕಳೆದ ವರ್ಷ ಭಾರತದಲ್ಲಿ ರಸ್ತೆ ಅಪಘಾತಗಳು “ಸಾರ್ವಕಾಲಿಕ ಗರಿಷ್ಠ” ಕ್ಕೆ ತಲುಪಿದೆ ಎಂದು ಗಮನಿಸಿದೆ. ವರದಿ ಪ್ರಕಾರ 2022 ರಲ್ಲಿ, ಮಿತಿಮೀರಿದ ವೇಗವು ಒಂದು ಪ್ರಮುಖ ಕಾರಣವಾಗಿದ್ದು, 71.2% ರಷ್ಟು ಜನರು ಇದರಿಂದಾಗಿ ಸಾವಿಗೀಡಾಗಿದ್ದರು. ಅದೇ ವೇಳೆ 5.4% ಜನರು ತಪ್ಪಾದ ಬದಿಯಲ್ಲಿ ಚಾಲನೆ ಮಾಡಿದ ಕಾರಣ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

2021 ಕ್ಕೆ ಹೋಲಿಸಿದರೆ 2022 ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ 11.9% ಹೆಚ್ಚಾಗಿದೆ. ರಸ್ತೆ ಅಪಘಾತಗಳ ಖಾತೆಯಲ್ಲಿ ಸಾವು ಮತ್ತು ಗಾಯಗಳ ಸಂಖ್ಯೆ 9.4% ಹೆಚ್ಚಾಗಿದೆ. 2022 ರಲ್ಲಿ ದೇಶದಲ್ಲಿ ಒಟ್ಟು ರಸ್ತೆ ಅಪಘಾತಗಳು ಮತ್ತು ಸಾವುಗಳು ಕ್ರಮವಾಗಿ 4,61,312 ಮತ್ತು 1,68,491 ಎಂದು ವರದಿಯಾಗಿದೆ. 2021 ರಲ್ಲಿ 4,12,432 ಅಪಘಾತಗಳು ಮತ್ತು 1,53,972 ಸಾವುನೋವುಗಳು ವರದಿಯಾಗಿವೆ ಎಂದು ಗಡ್ಕರಿ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಚಿವಾಲಯದ ವರದಿಯ ಪ್ರಕಾರ, ಎಲ್ಲಾ ರಸ್ತೆ ಅಪಘಾತಗಳಲ್ಲಿ 33% ಮತ್ತು ಮಾರಣಾಂತಿಕ ಅಪಘಾತಗಳಲ್ಲಿ 35% ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಭವಿಸಿವೆ. ಹೆದ್ದಾರಿ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ದಾಖಲೆಯ ಹೂಡಿಕೆಗಳ ಹೊರತಾಗಿಯೂ ಇದು ಆಗಿದೆ ಎಂದು ಗಡ್ಕರಿ ಹೇಳಿದರು.

ಹಣಕಾಸು ವರ್ಷ 2024 ರಲ್ಲಿ, ಹೆದ್ದಾರಿ ಸಚಿವಾಲಯಕ್ಕೆ ಕೇಂದ್ರ ಬಜೆಟ್‌ನಿಂದ ರೂ.2.7 ಟ್ರಿಲಿಯನ್‌ಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಎಂದು ಗಡ್ಕರಿ ಹೇಳಿದರು, ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಗವು 43% ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಆದಾಗ್ಯೂ, ಅಪಘಾತಗಳ ಹೆಚ್ಚಳದ ಬಗ್ಗೆ ಸರ್ಕಾರದ ಗಂಭೀರತೆಯನ್ನು ಗಡ್ಕರಿ ಒತ್ತಿ ಹೇಳಿದ್ದು ಈ ಹಿಂದೆ ಅಪಘಾತದ ಡೇಟಾವನ್ನು ಪ್ರಕಟಿಸಲು ಮೂರು ವರ್ಷಗಳ ವಿಳಂಬವು ಈಗ ಒಂದು ವರ್ಷಕ್ಕೆ ಇಳಿದಿದೆ ಎಂದಿದ್ದಾರೆ.

ಇದನ್ನೂ ಓದಿ:ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆ ಸೇರಿದಂತೆ 4 ಮಸೂದೆಗೆ ಲೋಕಸಭೆ ಅಂಗೀಕಾರ 

“ಅಪಘಾತದ ಡೇಟಾದ ನೈಜ-ಸಮಯದ ಮೇಲ್ವಿಚಾರಣೆಯು ಸವಾಲಿನ ವಿಷಯವಾಗಿದೆ. ಅಪಘಾತದ ಡೇಟಾವನ್ನು ಸಂಗ್ರಹಿಸುವ ಮತ್ತು 15 ದಿನಗಳಲ್ಲಿ ತಕ್ಷಣದ ಸರಿಪಡಿಸುವ ಕ್ರಮಗಳನ್ನು ಪ್ರಾರಂಭಿಸುವ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದೊಂದು ಗಂಭೀರ ವಿಚಾರವಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ