ಉಪರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾದ ರಾಹುಲ್ ಗಾಂಧಿಗೆ ಲಹರ್ ಸಿಂಗ್ ತರಾಟೆ

ಭಾರತದ ಉಪರಾಷ್ಟ್ರಪತಿಗಳ ಪ್ರಮಾಣವಚನ ಸಮಾರಂಭಕ್ಕೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗೈರು ಹಾಜರಾಗುವ ಮೂಲಕ ಪ್ರಜಾಪ್ರಭುತ್ವದ ಸತ್ಸಂಪ್ರದಾಯಗಳಿಗೆ ಮಾತ್ರವಲ್ಲ, ಒಬ್ಬ ಹಿರಿಯ, ಹಿಂದುಳಿದ ವರ್ಗಗಳ ನಾಯಕನಿಗೂ ಅಗೌರವ ತೋರಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಪರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾದ ರಾಹುಲ್ ಗಾಂಧಿಗೆ ಲಹರ್ ಸಿಂಗ್ ತರಾಟೆ
Lahar Singh Siroya

Updated on: Sep 12, 2025 | 7:10 PM

ನವದೆಹಲಿ, ಸೆಪ್ಟೆಂಬರ್ 12: ಇಂದು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಎನ್​ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ (CP Radhakrishnan) ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗಮಿಸಿರಲಿಲ್ಲ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದ (ರಾಜ್ಯಸಭಾ ಸದಸ್ಯ) ಲಹರ್ ಸಿಂಗ್ ಎಕ್ಸ್​ ಪೋಸ್ಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. “ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಉಪರಾಷ್ಟ್ರಪತಿಯ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವಾಗ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಅದು ಏಕೆ ಮುಖ್ಯವೆನಿಸಿಲ್ಲ?” ಎಂದು ಲಹರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ತಮ್ಮದೇ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾತ್ರ ರಾಹುಲ್ ಗಾಂಧಿ ಹಾಜರಾಗಲು ನಿರ್ಧರಿಸಿದ್ದರೆ, ಆ ದಿನ ಎಂದಿಗೂ ಬರದಂತೆ ದೇಶದ ಜನರೇ ನೋಡಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದ್ದಾರೆ.

“ದೆಹಲಿಯಲ್ಲಿ ಇಂದು ನಡೆದ ಭಾರತದ ಉಪರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿಲ್ಲ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪ್ರಜಾಪ್ರಭುತ್ವದ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ರಾಹುಲ್ ಗಾಂಧಿಯವರು ಅಗೌರವಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಕೂಡ ಅವರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಗೈರುಹಾಜರಾಗಿದ್ದಾರೆ” ಎಂದು ಲಹರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: CP Radhakrishnan Takes Oath: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿಪಿ ರಾಧಾಕೃಷ್ಣನ್

“ಇತ್ತೀಚೆಗೆ, ಹಿಂದುಳಿದ ವರ್ಗಗಳ ಬಗ್ಗೆ ರಾಹುಲ್ ಗಾಂಧಿ ಸಾಕಷ್ಟು ಮಾತನಾಡುತ್ತಿದ್ದಾರೆ. ಇಂದು ಸಮಾರಂಭಕ್ಕೆ ಹಾಜರಾಗದಿರುವ ಮೂಲಕ ತಮಿಳುನಾಡಿನ ಹಿಂದುಳಿದ ವರ್ಗಗಳಿಗೆ ಸೇರಿದ ಒಬ್ಬ ಹಿರಿಯ ನಾಯಕರನ್ನು ಅವರು ಅಗೌರವಿಸಿದ್ದಾರೆ. ಅವರು ನಿಜವಾಗಿಯೂ ಹಿಂದುಳಿದ ವರ್ಗಗಳನ್ನು ಎಷ್ಟು ಗೌರವಿಸುತ್ತಾರೆ ಎನ್ನುವುದು ಇದರಿಂದಲೇ ನಮಗೆ ತಿಳಿಯುತ್ತದೆ. ಬಿಹಾರದ ಜನತೆ ಕೂಡ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಆಗಾಗ ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿರುವುದು ದುಃಖಕರ ಸಂಗತಿ. ಖರ್ಗೆಯವರು ರಾಹುಲ್ ಗಾಂಧಿಯ ಪ್ರತಿನಿಧಿ ಅಥವಾ ಬದಲಿ ವ್ಯಕ್ತಿಯಲ್ಲ. ಅವರು ಹಿರಿಯರು, ಸ್ವತಂತ್ರವಾಗಿ ಮೇಲೆ ಬಂದಿರುವ ದಲಿತ ನಾಯಕ. ಮಲ್ಲಿಕಾರ್ಜುನ ಖರ್ಗೆಯವರೇ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವಾಗ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಹುಲ್ ಗಾಂಧಿ ಅವರಿಗೆ ಈ ಕಾರ್ಯಕ್ರಮ ಏಕೆ ಮುಖ್ಯವಾಗಲಿಲ್ಲ? ಅವರು ದೆಹಲಿಯಲ್ಲಿಯೇ ಇದ್ದಾರೆ ಎಂದು ನಾನು ಭಾವಿಸಿದ್ದೇನೆ. ಅಥವಾ ಅವರು ಬೇರೆಲ್ಲಿಗಾದರೂ ಹೋಗಿದ್ದಾರೆಯೇ?” ಎಂದು ಲಹರ್ ಸಿಂಗ್ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಭಾರತದ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ; ಸುದರ್ಶನ್ ರೆಡ್ಡಿ ವಿರುದ್ಧ 152 ಮತಗಳ ಗೆಲುವು

“ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನಡುವಿನ ವ್ಯತ್ಯಾಸವೆಂದರೆ ಖರ್ಗೆಯವರು ಕಠಿಣ ಹಾದಿಯಲ್ಲಿ ನಡೆದು ಮೇಲೆ ಬಂದಿದ್ದಾರೆ. ತಾನು ತಲುಪಿರುವ ಹಂತವನ್ನು ತಲುಪುವುದು ಎಷ್ಟು ಕಷ್ಟ ಎಂದು ಅವರಿಗೆ ತಿಳಿದಿದೆ. ಆದರೆ ರಾಹುಲ್ ಗಾಂಧಿಯವರು ಆ ಸ್ಥಾನ ತಮ್ಮ ಹಕ್ಕು ಮತ್ತು ವಂಶ ಪಾರಂಪರ್ಯ ಸವಲತ್ತು ಎಂದು ಭಾವಿಸಿದ್ದಾರೆ. ತಮ್ಮದೇ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಮಾತ್ರ ಹಾಜರಾಗುವ ಸಂಕಲ್ಪವನ್ನೇನಾದರೂ ಅವರು ಮಾಡಿದ್ದರೆ ಆ ದಿನ ಎಂದಿಗೂ ಬರದಂತೆ ಭಾರತದ ಪ್ರಜೆಗಳೇ ನೋಡಿಕೊಳ್ಳುತ್ತಾರೆ” ಎಂದು ಲಹರ್ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ