ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದೆ. ಲಖೀಂಪುರ ಖೇರಿ ಹಿಂಸಾಚಾರದ ಘಟನೆಯ ಕುರಿತ ಸತ್ಯಾಂಶಗಳ ಪತ್ರವನ್ನು ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಾಯಕರು ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ. ಎಕೆ ಆಂಟನಿ, ಗುಲಾಂ ನಬಿ ಆಜಾದ್, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಒಳಗೊಂಡ ಕಾಂಗ್ರೆಸ್ನ ಏಳು ಸದಸ್ಯರ ನಿಯೋಗ ಇಂದು ಬೆಳಗ್ಗೆ 11.30ಕ್ಕೆ ರಾಷ್ಟ್ರಪತಿಯನ್ನು ಭೇಟಿಯಾಗಲಿದೆ.
ಅ. 3ರಂದು ನಡೆದ ರೈತರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ವಿರುದ್ಧ ಕೇಸ್ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ. ಕಳೆದ ಅಕ್ಟೋಬರ್ 3ರಂದು ಲಖೀಂಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. ಲಖಿಂಪುರ ಖೇರಿಯಲ್ಲಿ ಪ್ರತಿಭಟನಾಕಾರರಿಗೆ ಕಾರಿನಿಂದ ಡಿಕ್ಕಿ ಹೊಡೆದು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಒಂದರ ಹಿಂದೊಂದು ವೇಗವಾಗಿ ಬಂದ ಎಸ್ಯುವಿ ಕಾರುಗಳು ರೈತರಿಗೆ ಡಿಕ್ಕಿ ಹೊಡೆದು ಹೋಗಿತ್ತು. ಬಳಿಕ ಅದರಲ್ಲಿ ಒಂದು ಕಾರನ್ನು ರೈತರು ಸುಟ್ಟು ಹಾಕಿದ್ದರು. ಆ ದಿನ ಉದ್ದೇಶಪೂರ್ವಕವಾಗಿಯೇ ವೇಗವಾಗಿ ಬಂದು ರೈತರ ಮೇಲೆ ಕಾರು ಹರಿಸಿ ಕೊಲ್ಲಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಅ. 3ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ರೈತರಾಗಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಓಡಿಸುತ್ತಿದ್ದ ವಾಹನಗಳನ್ನು ರೈತರ ಮೇಲೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಆ ಎರಡು ಕಾರುಗಳಲ್ಲಿ ಒಂದು ಕಾರನ್ನು ಓಡಿಸುತ್ತಿದ್ದುದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಎಂದು ಕೇಸ್ ದಾಖಲಿಸಲಾಗಿತ್ತು. ಬಳಿಕ ವಿಚಾರಣೆಗೆ ಹಾಜರಾಗಿದ್ದ ಆಶಿಶ್ ಮಿಶ್ರಾ ಅವರನ್ನು ಎಸ್ಐಟಿ ತಂಡ ಕೋರ್ಟ್ ಮುಂದೆ ಹಾಜರುಪಡಿಸಿತ್ತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆಶಿಶ್ ಮಿಶ್ರಾ ಅವರನ್ನು ಇದೀಗ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: Lakhimpur Kheri violence ಆಶಿಶ್ ಮಿಶ್ರಾ 3 ದಿನ ಪೊಲೀಸ್ ವಶಕ್ಕೆ; ಉತ್ತರ ಪ್ರದೇಶದ ನ್ಯಾಯಾಲಯ ಆದೇಶ
Ashish Mishra: ಲಖಿಂಪುರ ಖೇರಿ ಹತ್ಯೆ ಪ್ರಕರಣ; ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾ ಬಂಧನ