ನವದೆಹಲಿ: ಅನಾರೋಗ್ಯದಿಂದಾಗಿ ಮಂಗಳವಾರ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರನ್ನು ಇಂದು ಬೆಳಗಿನ ಜಾವ 3 ಗಂಟೆಗೆ ಡಿಸ್ಚಾರ್ಜ್ ಮಾಡಲಾಗಿದೆ. ಇದಕ್ಕೂ ಮೊದಲು ಅವರನ್ನು ತುರ್ತು ವಿಭಾಗದಲ್ಲಿ ರಾತ್ರಿಯಿಡೀ ನಿಗಾದಲ್ಲಿ ಇರಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿರುವ 73 ವರ್ಷದ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ (RIMS) ವೈದ್ಯಕೀಯ ಮಂಡಳಿಯಿಂದ ಲಾಲೂ ಪ್ರಸಾದ್ ಯಾದವ್ ಅವರನ್ನು ಮಂಗಳವಾರ ರಾತ್ರಿ 9 ಗಂಟೆಗೆ ದೆಹಲಿಯ ಏಮ್ಸ್‌ಗೆ ಕರೆತರಲಾಗಿತ್ತು.
“ಲಾಲೂ ಪ್ರಸಾದ್ ಯಾದವ್ ಅವರನ್ನು ರಾತ್ರಿಯಿಡೀ ತುರ್ತು ವಿಭಾಗದಲ್ಲಿ ನಿಗಾ ಇರಿಸಲಾಗಿತ್ತು. ಅವರ ಆರೋಗ್ಯವನ್ನು ಪರಿಶೀಲನೆ ನಡೆಸಲಾಯಿತು. ಬೆಳಗ್ಗೆ 3 ಗಂಟೆಗೆ ಡಿಸ್ಚಾರ್ಜ್ ಮಾಡಲಾಯಿತು” ಎಂದು ಮೂಲವೊಂದು ತಿಳಿಸಿದೆ.
ಮೇವು ಹಗರಣದಲ್ಲಿ ಡೊರಾಂಡಾ ಖಜಾನೆಯಿಂದ 139 ಕೋಟಿ ರೂ. ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿದ್ದ ಲಾಲೂ ಪ್ರಸಾದ್ ಯಾದವ್‌ಗೆ ವಿಶೇಷ ಸಿಬಿಐ ನ್ಯಾಯಾಲಯವು ಫೆಬ್ರವರಿ 21ರಂದು 5 ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂ. ದಂಡ ವಿಧಿಸಿತು.
ಫೆಬ್ರವರಿ 15ರಂದು ನ್ಯಾಯಾಲಯವು ಲಾಲೂ ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ಘೋಷಿಸಿತು. 950 ಕೋಟಿ ರೂ. ಮೇವು ಹಗರಣ (ಐದು ಮೇವು ಹಗರಣಗಳ ಒಟ್ಟು ಹಗರಣ, ಲಾಲು ತಪ್ಪಿತಸ್ಥರೆಂದು ಸಾಬೀತಾಗಿದೆ) ಅವಿಭಜಿತ ಬಿಹಾರದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಸಾರ್ವಜನಿಕ ಹಣವನ್ನು ವಂಚನೆಯಿಂದ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದೆ. ಲಾಲೂ ಪ್ರಸಾದ್ ಯಾದವ್ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಜನವರಿ 1996ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಚೈಬಾಸಾ ಉಪ ಆಯುಕ್ತ ಅಮಿತ್ ಖರೆ ನಡೆಸಿದ ದಾಳಿಯ ನಂತರ ಮೇವು ಹಗರಣ ಬೆಳಕಿಗೆ ಬಂದಿತು. ಜೂನ್ 1997ರಲ್ಲಿ ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೊದಲ ಬಾರಿಗೆ ಮೇವು ಪ್ರಕರಣದಲ್ಲಿ ಆರೋಪಿ ಎಂದು ಘೋಷಿಸಲಾಯಿತು.
“ಲಾಲೂ ಪ್ರಸಾದ್ ಯಾದವ್ ಅವರ ಕ್ರಿಯೇಟಿನೈನ್ ಮಟ್ಟವು 4.6ಕ್ಕೆ ಏರಿತ್ತು, ಇದು ಮೊದಲು 3.5ರಷ್ಟಿತ್ತು. ಅವರ ರಕ್ತದ ಸಕ್ಕರೆ ಅಂಶ ಮತ್ತು ರಕ್ತದೊತ್ತಡದಲ್ಲಿ ಏರಿಳಿತವಾಗಿತ್ತು. ಏಳು ಸದಸ್ಯರ ತಂಡದ ಮುಖ್ಯಸ್ಥರಾದ ಡಾ. ವಿದ್ಯಾಪತಿ ಪ್ರಸಾದ್‌ಗೆ ಚಿಕಿತ್ಸೆ ನೀಡಲು ರಿಮ್ಸ್ ರಚಿಸಿರುವ ವೈದ್ಯರು ಮಂಗಳವಾರ ತಿಳಿಸಿದ್ದರು.
ಇದನ್ನೂ ಓದಿ: Lalu Prasad Yadav: ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಏಮ್ಸ್ ಆಸ್ಪತ್ರೆಗೆ ಶಿಫ್ಟ್
ಲಾಲೂ ಪ್ರಸಾದ್ ಯಾದವ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ ವಾದ್ರಾ; ಬಿಜೆಪಿ ವಿರುದ್ಧ ವಾಗ್ದಾಳಿ