ರಸ್ತೆ ಬದಿಯಲ್ಲಿ ಬಿದ್ದಿದ್ದ ಮಿಠಾಯಿ ತಿಂದು ನಾಲ್ವರು ಮಕ್ಕಳು ಸಾವು; ಪೊಲೀಸರಿಂದ ತನಿಖೆ ಪ್ರಾರಂಭ
ಘಟನೆಯ ಬಗ್ಗೆ ಪೊಲೀಸರು ಸಮಗ್ರವಾಗಿ ಮಾಹಿತಿ ನೀಡಿದ್ದಾರೆ. ಸಿನ್ಸಾಯಿ ಗ್ರಾಮದಲ್ಲಿ ಈ ಎಲ್ಲ ಮಕ್ಕಳೂ ಒಟ್ಟಾಗಿ ಮನೆಯ ಹೊರಗೆ ಆಡುತ್ತಿದ್ದರು. ಇವರ ಪಾಲಕರೆಲ್ಲ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ದಿನಗೂಲಿಯವರು. ಬೆಳಗ್ಗೆದ್ದು ಅಲ್ಲೇ ಅಕ್ಕಪಕ್ಕದ ಪ್ರದೇಶಗಳಿಗೆ ಕೆಲಸಕ್ಕೆಂದು ತೆರಳುತ್ತಾರೆ.
ಸಿಹಿ ಮಿಠಾಯಿ ಅಂದರೆ ಇಷ್ಟಪಡದ ಮಕ್ಕಳು ತೀರ ಕಡಿಮೆ. ಪುಟ್ಟಪುಟ್ಟ ಚಾಕಲೇಟ್ಗಳಂತೆ ಇರುವ ಇವುಗಳನ್ನು ನೋಡಿದರೆ ಅದರಲ್ಲೂ ಚಿಕ್ಕಚಿಕ್ಕ ಮಕ್ಕಳಂತೂ ಆಸೆಯಿಂದ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತವೆ. ಆದರೆ ಇಂಥ ಸಿಹಿ ಮಿಠಾಯಿಯಿಂದಲೇ ನಾಲ್ವರು ಮಕ್ಕಳ ಪ್ರಾಣ ಹೋದ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಇವರೆಲ್ಲ ಕುಶಿನಗರದ ಸಿನ್ಸಾಯಿ ಗ್ರಾಮದ ಮಕ್ಕಳು. ತಮ್ಮ ಮನೆ ಸಮೀಪದ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಮಿಠಾಯಿಗಳನ್ನು ಹೆಕ್ಕಿ ತಿಂದಿದ್ದಾರೆ. ಇವರೆಲ್ಲರೂ ಕೂಡ ಏಳು ವರ್ಷಕ್ಕಿಂತಲೂ ಕಡಿಮೆ ವಯಸ್ಸು. ದಾರಿಯಲ್ಲಿ ಬಿದ್ದಿದೆ, ಹಾಗೆಲ್ಲ ಹೆಕ್ಕಿ ತಿನ್ನಬಾರದು ಎಂದು ಗೊತ್ತಾಗದೆ, ತುಂಬ ಖುಷಿಯಿಂದ ತಿಂದು ಬಿಟ್ಟಿದ್ದಾರೆ. ಆದರೆ ಅದಾದ ಕೆಲವೇ ಹೊತ್ತಲ್ಲಿ ಎಲ್ಲರ ಪ್ರಾಣವೂ ಹೋಗಿದೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟಿದ್ದು, ಮಿಠಾಯಿಯ ಪೇಪರ್ನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಯಾರೋ ಮಿಠಾಯಿಗಳಿಗೆ ವಿಷ ಲೇಪನ ಮಾಡಿ ಬಿಸಾಕಿದ್ದರಬೇಕು ಎಂಬ ಅನುಮಾನವನ್ನು ವ್ಯಕ್ತಪಡಿಸಿರುವ ಪೊಲೀಸರು ಎಲ್ಲ ಆಯಾಮಗಳನ್ನೂ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಸದ್ಯ ಮೃತ ಮಕ್ಕಳ ದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಖಚಿತ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
ಆಗಿದ್ದೇನು?
ಘಟನೆಯ ಬಗ್ಗೆ ಪೊಲೀಸರು ಸಮಗ್ರವಾಗಿ ಮಾಹಿತಿ ನೀಡಿದ್ದಾರೆ. ಸಿನ್ಸಾಯಿ ಗ್ರಾಮದಲ್ಲಿ ಈ ಎಲ್ಲ ಮಕ್ಕಳೂ ಒಟ್ಟಾಗಿ ಮನೆಯ ಹೊರಗೆ ಆಡುತ್ತಿದ್ದರು. ಇವರ ಪಾಲಕರೆಲ್ಲ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ದಿನಗೂಲಿಯವರು. ಬೆಳಗ್ಗೆದ್ದು ಅಲ್ಲೇ ಅಕ್ಕಪಕ್ಕದ ಪ್ರದೇಶಗಳಿಗೆ ಕೆಲಸಕ್ಕೆಂದು ತೆರಳುತ್ತಾರೆ. ಹಾಗೇ ಚಿಕ್ಕಮಕ್ಕಳು ಮನೆಯಲ್ಲಿ ಅಜ್ಜಿಯೊಂದಿಗೋ, ಅಕ್ಕಂದಿರೊಟ್ಟಿಗೋ ಇರುತ್ತಾರೆ. ಹಾಗೇ, ಇಂದೂ ಬೆಳಗ್ಗೆ ಪಾಲಕರು ಕೆಲಸಕ್ಕೆ ಹೋಗಿದ್ದರು. ಮಕ್ಕಳು ಆಟವಾಡುತ್ತಿದ್ದರು. ಇದೇ ವೇಳೆ ರಸ್ತೆ ಬದಿಯಲ್ಲಿ ಒಂದಷ್ಟು ಮಿಠಾಯಿ ಕಂಡು ಅದನ್ನು ಹೆಕ್ಕಿ ತಿಂದಿದ್ದಾರೆ. ಆದರೆ ಕೂಡಲೇ ಎಚ್ಚರ ತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಮೂರ್ನಾಲ್ಕು ಜನ ಸೇರಿ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕಲ್ಲಿದ್ದಲು ಕೊರತೆ; ಆರ್ಟಿಪಿಎಸ್ನ 3 ವಿದ್ಯುತ್ ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ