ಮಾರ್ಚ್​ 31ರಿಂದ ದೇಶದಲ್ಲಿ ಕೊವಿಡ್ 19 ನಿರ್ಬಂಧ ನಿಯಮಗಳು ಇರುವುದಿಲ್ಲ, ಮಾಸ್ಕ್​ ಮಾತ್ರ ಕಡ್ಡಾಯ: ಕೇಂದ್ರ ಸರ್ಕಾರ

ನಿರ್ಬಂಧ ತೆಗೆದುಹಾಕುವ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಸಹಿ ಇರುವ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊವಿಡ್ 19 ನಿರ್ಬಂಧ ನಿಯಮಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಅನ್ವಯಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಮಾರ್ಚ್​ 31ರಿಂದ ದೇಶದಲ್ಲಿ ಕೊವಿಡ್ 19 ನಿರ್ಬಂಧ ನಿಯಮಗಳು ಇರುವುದಿಲ್ಲ, ಮಾಸ್ಕ್​ ಮಾತ್ರ ಕಡ್ಡಾಯ: ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us
| Updated By: Lakshmi Hegde

Updated on:Mar 23, 2022 | 2:57 PM

ಕೊವಿಡ್​ 19 ನಿಯಂತ್ರಣಕ್ಕಾಗಿ (Covid 19 Restrictions) ಕೇಂದ್ರ ಸರ್ಕಾರದಿಂದ ಹೇರಲಾಗಿದ್ದ ಎಲ್ಲ ನಿರ್ಬಂಧಗಳನ್ನೂ ಮಾರ್ಚ್​ 31ರಿಂದ ತೆಗೆದುಹಾಕಲು ನಿರ್ಧಾರ ಮಾಡಿದ್ದಾಗಿ ಗೃಹ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲ, ಕೊವಿಡ್ 19 ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ವಿಪತ್ತು ನಿರ್ವಹಣಾ ಕಾಯ್ದೆಯನ್ನೂ ಅನ್ವಯಿಸುವುದಿಲ್ಲ (ಕೊವಿಡ್​ 19 ನಿರ್ಬಂಧ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗುವುದಿಲ್ಲ) ಎಂದು ಸ್ಪಷ್ಟಪಡಿಸಿದೆ. ಆದರೆ ಮಾಸ್ಕ್​ ಮಾತ್ರ  ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿರುತ್ತದೆ ಎಂದೂ ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಜತೆಗೆ ಕೊವಿಡ್​ 19 ಲಸಿಕೆ ಅಭಿಯಾನವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮೂರನೇ ಅಲೆಗೆ ಕಾರಣವಾಗಿದ್ದ ಒಮಿಕ್ರಾನ್​ ಸೋಂಕಿನ ಪ್ರಸರಣ ತಗ್ಗಿದೆ. ಹಾಗಿದ್ದಾಗ್ಯೂ ಚೀನಾ, ದಕ್ಷಿಣ ಕೊರಿಯಾ, ಯುಕೆ, ಸಿಂಗಾಪುರ, ಫ್ರಾನ್ಸ್​, ಜರ್ಮನಿಗಳಲ್ಲಿ ಮತ್ತೆ ಹೊಸದಾಗಿ ಕೊವಿಡ್ 19 ಪ್ರಸರಣ ಉತ್ತುಂಗಕ್ಕೇರಿದ್ದು, ಲಾಕ್​ಡೌನ್​​ನಂಥ ನಿರ್ಬಂಧಗಳನ್ನು ಹೇರಲಾಗುತ್ತಿದೆ.  ಆದರೂ ಕೂಡ ಕೇಂದ್ರ ಸರ್ಕಾರ ಎಲ್ಲ ರೀತಿಯ ಕೊವಿಡ್ 19 ನಿರ್ಬಂಧ ಮಾರ್ಗಸೂಚಿಗಳನ್ನು ಮಾರ್ಚ್​ 31ರಿಂದ ತೆಗೆದುಹಾಕುವುದಾಗಿ ಘೋಷಿಸಿದೆ.

ನಿರ್ಬಂಧ ತೆಗೆದುಹಾಕುವ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಸಹಿ ಇರುವ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊವಿಡ್ 19 ನಿರ್ಬಂಧ ನಿಯಮಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಅನ್ವಯಿಸುವ ಅಗತ್ಯವಿಲ್ಲ ಎಂದು  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ. ಆದರೆ ಮಾಸ್ಕ್​ವೊಂದನ್ನು ಕಡ್ಡಾಯವಾಗಿ ಧರಿಸಬೇಕು. ಇನ್ನು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹೇಳಲಾಗಿದೆ.  ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಈ  ಪ್ರಕಟಣೆಯನ್ನು ಪರಿಗಣಿಸಬೇಕು. ಈ ಹಿಂದೆ ಕೊವಿಡ್​ 19 ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ವಿಧಿಸಲಾಗಿದ್ದ ಮಾರ್ಗಸೂಚಿಗಳನ್ನು ರದ್ದು ಮಾಡಬಹುದು ಎಂದೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹೆಚ್ಚಾಗಿದೆ ಕೊರೊನಾ ವೈರಸ್​; ಒಂದು ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿನಿಂದ ಸಾವು

Published On - 2:21 pm, Wed, 23 March 22