AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀದಿ ನಾಡಲ್ಲಿ 8 ಮಂದಿ ಸಜೀವ ದಹನ; ಸ್ವಯಂಪ್ರೇರಿತವಾಗಿ ಕೇಸ್​ ದಾಖಲಿಸಿಕೊಂಡ ಹೈಕೋರ್ಟ್​, ಮನೆ ತೊರೆಯುತ್ತಿರುವ ಸ್ಥಳೀಯರು

ಈ ಘಟನೆ ರಾಜಕೀಯ ಕಾದಾಟಕ್ಕೂ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ನೈಜ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ದೀದಿ ನಾಡಲ್ಲಿ 8 ಮಂದಿ ಸಜೀವ ದಹನ; ಸ್ವಯಂಪ್ರೇರಿತವಾಗಿ ಕೇಸ್​ ದಾಖಲಿಸಿಕೊಂಡ ಹೈಕೋರ್ಟ್​, ಮನೆ ತೊರೆಯುತ್ತಿರುವ ಸ್ಥಳೀಯರು
ಪಶ್ಚಿಮ ಬಂಗಾಳದಲ್ಲಿ ಮನೆಗಳಿಗೆ ಬೆಂಕಿ
TV9 Web
| Edited By: |

Updated on: Mar 23, 2022 | 1:22 PM

Share

ಪಶ್ಚಿಮ ಬಂಗಾಳದ ಬಿರ್ಬುಮ್​ ಜಿಲ್ಲೆಯ ರಾಂಪುರಹತ್​​ನ ಭಗುಟಿ ಗ್ರಾಮದಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಕೋಲ್ಕತ್ತ ಹೈಕೋರ್ಟ್​ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಹೈಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಬಿರ್ಬುಮ್​​​ನ ಬರೋಸಾಲ್ ಗ್ರಾಮ ಪಂಚಾಯಿತಿ ಉಪಪ್ರಧಾನ್​ (ಉಪಾಧ್ಯಕ್ಷ) ಭಡು ಶೇಖ್​ ಎಂಬುವರನ್ನು ಬಾಂಬ್​ ಹಾಕಿ ಕೊಲ್ಲಲಾಗಿತ್ತು. ಇವರು ಟಿಎಂಸಿ ನಾಯಕರಾಗಿದ್ದು, ಸ್ಥಳೀಯವಾಗಿ ತುಂಬ ಪ್ರಾಬಲ್ಯ ಹೊಂದಿದವರಾಗಿದ್ದರು. ಇವರ ಹತ್ಯೆ ನಡೆದ ಬೆನ್ನಲ್ಲೇ ಬೆಂಬಲಿಗರು ಆಕ್ರೋಶಗೊಂಡು ಸಿಕ್ಕಸಿಕ್ಕ ಮನೆಗಳಿಗೆ ನುಗ್ಗಿ ಬೆಂಕಿ ಇಟ್ಟಿದ್ದರು. ಈ ಘಟನೆಯಲ್ಲಿ ಸುಮಾರು 8 ಮಂದಿ ಸಜೀವ ದಹನಗೊಂಡಿದ್ದಾರೆ, ಅದರಲ್ಲಿ ಇಬ್ಬರು ಮಕ್ಕಳೂ ಇದ್ದಾರೆ ಎಂದು ಬಿರ್ಬುಮ್ ಎಸ್​​ಪಿ ನಾಗೇಂದ್ರ ತ್ರಿಪಾಠಿ ಮಾಹಿತಿ ನೀಡಿದ್ದರು.  ಇದನ್ನೀಗ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ಇದು ಮಂಗಳವಾರ (ಮಾರ್ಚ್​ 22) ನಡೆದ ಭೀಕರ ಗಲಾಟೆ. ರಾಷ್ಟ್ರೀಯ ಹೆದ್ದಾರಿಯ ಅಂಗಡಿಯೊಂದರಲ್ಲಿ ನಿಂತಿದ್ದ ಉಪಾಧ್ಯಕ್ಷ ಭಡು ಶೇಖ್​ ಅವರನ್ನು, ಬೈಕ್​ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಕಚ್ಚಾ  ಬಾಂಬ್​ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆದರೆ ಭಡು ಶೇಖ್​ ಬೆಂಬಲಿಗರು ಮಾತ್ರ ತಾಳ್ಮೆ ಕಳೆದುಕೊಂಡು 12 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ.  ಇಲ್ಲಿಯವರೆಗೆ ಘಟನೆಗೆ ಸಂಬಂಧಪಟ್ಟಂತೆ ಸುಮಾರು 20 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಶೇಷ ತನಿಖಾ ತಂಡವೂ ರಚನೆಯಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರವೂ ಕೂಡ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯ ಗೃಹ ಸಚಿವಾಲಯವನ್ನು ಕೇಳಿದೆ.

ಮನೆ ತೊರೆಯುತ್ತಿರುವ ಜನರು

ಹಿಂಸಾಚಾರಕ್ಕೆ ಬಿರ್ಬುಮ್​ ಜಿಲ್ಲೆಯ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಹಿಂಸಾಚಾರ ನಡೆದ ಪ್ರದೇಶಗಳ ಜನರಂತೂ ತಮ್ಮ ಮನೆಗಳನ್ನು ತೊರೆದು ಹೋಗುತ್ತಿದ್ದಾರೆ. ನಮ್ಮ ಭದ್ರತೆ ದೃಷ್ಟಿಯಿಂದ ಇಲ್ಲಿಂದ ಹೊರಡುತ್ತಿದ್ದೇವೆ. ಘಟನೆಯಲ್ಲಿ ನನ್ನ ಬಾವನೊಬ್ಬ ಮೃತಪಟ್ಟ. ಪೊಲೀಸರು ಸರಿಯಾಗಿ ಭದ್ರತೆ ಕಲ್ಪಿಸಿದ್ದರೆ ಈ ಘಟನೆ ನಡೆಯುತ್ತಿಲ್ಲ ಎಂದು ಹಳ್ಳಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾಗಿ ಎಎನ್​ಐ ತಿಳಿಸಿದೆ.

ಇನ್ನು ಈ ಘಟನೆ ರಾಜಕೀಯ ಕಾದಾಟಕ್ಕೂ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ನೈಜ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಕಾಲಿಡಲು ಯಾರಿಗೂ ಬಿಡುತ್ತಿಲ್ಲ ಎಂದು ಬಿಜೆಪಿ ಎಂಪಿ ಲೊಕೆಟ್​ ಚಟರ್ಜಿ ಆರೋಪಿಸಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್​ಕರ್​ ಕೂಡ ವಿಡಿಯೋ ಸಂದೇಶದ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅದರ ಬೆನ್ನಲ್ಲೇ ಅವರಿಗೆ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ, ಅನಗತ್ಯ ಹೇಳಿಕೆಗಳನ್ನ ನೀಡಬೇಡಿ ಎಂದಿದ್ದಾರೆ.

ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಗ್ರಾಮ ಪಂಚಾಯಿತಿ ಅಧ್ಯಕ್ಷನ ಹತ್ಯೆ ಬೆನ್ನಲ್ಲೇ, 8 ಜನರ ಸಜೀವ ದಹನ