ಉತ್ತರ ಪ್ರದೇಶ: ದೇವಾಲಯಕ್ಕೆ ಕಾರಿನಲ್ಲೇ ಪ್ರದಕ್ಷಿಣೆ ಮಾಡಲು ಬಂದ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್​​ಗೆ ತಡೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 4:17 PM

ಯಾದವ್ ಅವರು ಕಾರಿನಲ್ಲೇ ಪ್ರದಕ್ಷಿಣೆ ಮಾಡುವುದಕ್ಕೆ ಕೇಳಿಕೊಂಡರು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಯಾದವ್ ಅವರು ಮಥುರಾ ಮತ್ತು ಬೃಂದಾವನಕ್ಕೆ ಆಗಾಗ್ಗೆ ಭೇಟಿ ನೀಡುವವರಾಗಿದ್ದು, ನಿನ್ನೆ ದೇವಾಲಯಕ್ಕೆ ಬಂದಿದ್ದರು.

ಉತ್ತರ ಪ್ರದೇಶ: ದೇವಾಲಯಕ್ಕೆ ಕಾರಿನಲ್ಲೇ ಪ್ರದಕ್ಷಿಣೆ ಮಾಡಲು ಬಂದ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್​​ಗೆ ತಡೆ
ತೇಜ್ ಪ್ರತಾಪ್ ಯಾದವ್
Follow us on

ಮಥುರಾ: ಆರ್ ಜೆಡಿ ನಾಯಕ, ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರ ಕಾರು ಇಲ್ಲಿನ ಗಿರಿರಾಜ್ ಮಹಾರಾಜ್ ದೇವಾಲಯಕ್ಕೆ (Giriraj Maharaj temple) ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ಬಿಹಾರದ ಮಾಜಿ ಸಚಿವರಾದ ಯಾದವ್, ಅಪ್ಪ ಲಾಲೂ ಯಾದವ್ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಮಂಗಳವಾರ ಗಿರಿರಾಜ್ ಮಹಾರಾಜ್ ದೇವಾಲಯಕ್ಕೆ ಬಂದಿದ್ದರು. ಆದರೆ ಪೊಲೀಸರು ಕಾರು ಪ್ರವೇಶಕ್ಕೆ ತಡೆಯೊಡ್ಡಿದ್ದರಿಂದ ಅವರು ದೇವಾಲಯಕ್ಕೆ ಭೇಟಿ ನೀಡದೆ ಮರಳಿದ್ದಾರೆ. ಮುಡಿಯಾ ಪೂರ್ಣಿಮಾ ಆಗಿದ್ದರಿಂದ ದೇವಾಲಯದಲ್ಲಿ ಭಾರೀ ಜನರು ಸೇರಿದ್ದರು. ಯಾದವ್ ಅವರು ಕಾರಿನಲ್ಲೇ ಪ್ರದಕ್ಷಿಣೆ ಮಾಡುವುದಕ್ಕೆ ಕೇಳಿಕೊಂಡರು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಯಾದವ್ ಅವರು ಮಥುರಾ ಮತ್ತು ಬೃಂದಾವನಕ್ಕೆ ಆಗಾಗ್ಗೆ ಭೇಟಿ ನೀಡುವವರಾಗಿದ್ದು, ನಿನ್ನೆ ದೇವಾಲಯಕ್ಕೆ ಬಂದಿದ್ದರು. ವಾಹನಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಪೊಲೀಸರು ಯಾದವ್ ಕಾರನ್ನು ತಡೆದಿದ್ದಾರೆ. ಆಗ ತೇಜ್ ಪ್ರತಾಪ್ ಯಾದವ್ ಅಲ್ಲಿ ಜಗಳವಾಡಿದ್ದು, ಉತ್ತರ ಪ್ರದೇಶ ಪೊಲೀಸರು ತಮ್ಮ ಕಾರನ್ನು ತಡೆದಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇದಾದ ನಂತರ ಅವರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕಾರಿಗೆ ಪ್ರವೇಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಅಲ್ಲಿಯೂ ಪೊಲೀಸ್ ಠಾಣೆಯ ಅಧಿಕಾರಿ ಅನುಮತಿ ನಿರಾಕರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗೋವರ್ಧನದ ಸರ್ಕಲ್ ಆಫೀಸರ್ ಗೌರವ್ ತ್ರಿಪಾಠಿ, ಮುಡಿಯಾ ಪೂರ್ಣಿಮೆಯಂದು ಅಧಿಕ ಸಂಖ್ಯೆಯಲ್ಲಿ ಜನರು ಬರುವುದರಿಂದ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ, ನಾವು ತುರ್ತು ವಾಹನಗಳಿಗೆ ಮಾತ್ರ ಅನುಮತಿ ನೀಡುತ್ತಿದ್ದೇವೆ. ದೇವಾಲಯದಲ್ಲಿ ಪ್ರಾರ್ಥನೆ ಮಾಡಬಯಸುವವರು ಕಾಲ್ನಡಿಗೆಯಲ್ಲೇ ಪ್ರದಕ್ಷಿಣೆ ಮಾಡಬೇಕು. ಆದರೆ ವಾಹನಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ ಎಂದು ತ್ರಿಪಾಠಿ ಹೇಳಿದ್ದಾರೆ.

Published On - 4:15 pm, Wed, 13 July 22