ಲಿಂಬೆ ಹಣ್ಣಿನ ಬೆಲೆ ಭರ್ಜರಿ ಏರಿಕೆ; ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿದೆ ಲಿಂಬು ಕಳ್ಳತನದ ಪ್ರಕರಣಗಳು

| Updated By: Lakshmi Hegde

Updated on: Apr 14, 2022 | 11:57 AM

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ದೀಲ್​ಪೀರ್​ ಮಾರುಕಟ್ಟೆಯಿಂದ ಕಳ್ಳರು 50 ಕೆಜಿಗಳಷ್ಟು ಲಿಂಬೆಹಣ್ಣು ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪೊಲೀಸರು ಮಾರ್ಕೆಟ್​ ಬಳಿ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಲಿಂಬೆ ಹಣ್ಣಿನ ಬೆಲೆ ಭರ್ಜರಿ ಏರಿಕೆ; ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿದೆ ಲಿಂಬು ಕಳ್ಳತನದ ಪ್ರಕರಣಗಳು
ಲಿಂಬು ಹಣ್ಣು
Follow us on

ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಳಿತವಾಗುವುದು ಸಹಜ. ಒಮ್ಮೊಮ್ಮೆ ಒಂದೊಂದು ತರಕಾರಿ-ಹಣ್ಣುಗಳಿಗೆ ಚಿನ್ನದ ಬೆಲೆ ಬಂದರೆ ಮತ್ತೊಮ್ಮೆ ಪಾತಾಳಕ್ಕೆ ಕುಸಿದು ಬೆಳೆಗಾರರನ್ನು ಕಂಗಾಲು ಮಾಡುತ್ತದೆ. ಒಂದು ಕಾಲಾದಲ್ಲಿ ಈರುಳ್ಳಿ ಬೆಲೆ ಸಿಕ್ಕಾಪಟೆ ಏರಿದ್ದು, ಅದರ ಕಳ್ಳತನವಾಗಿದ್ದ ವರದಿಗಳನ್ನು ನಾವು ನೋಡಿದ್ದೇವೆ. ಆದರೆ ಈಗ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಆ ಜಾಗದಲ್ಲಿ ಲಿಂಬು ನಿಂತಿದೆ. ಬಿರುಬೇಸಿಗೆಯಲ್ಲಿ ಲಿಂಬು ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು ಹಾಗೇ ಬೆಲೆಯೂ ಗಗನಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಕೆಜಿಗೆ 250 ರೂಪಾಯಿ ಇದೆ. ಈ ಮಧ್ಯೆ ಲಿಂಬು ಕಳ್ಳತನವೂ ಹೆಚ್ಚುತ್ತಿದೆ. ಶಹಜಾನ್​ಪುರ, ಬರೇಲಿಗಳಲ್ಲಿ ಲಿಂಬೆ ಕಳವಾಗಿರುವ ಬಗ್ಗೆ ಆಯಾ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಕಾಶ್ಮೀರದಿಂದ ತಮಿಳುನಾಡಿನವರೆಗೆ ಬಿಸಿಲಿನ ಝಳ ಏರುತ್ತಲೇ ಇದೆ. ಉತ್ತರ ಭಾರತದ ಕಡೆಗಂತೂ 40-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಕರ್ನಾಟಕದ ಬಳ್ಳಾರಿಯಲ್ಲಿ 37 ಡಿಗ್ರಿ ಸೆಲ್ಸಿಯಸ್​ವರೆಗೆ ಉಷ್ಣತೆ ಏರಿದೆ. ಹೀಗಾಗಿ ಜನರು ಸಹಜವಾಗಿಯೇ ತಂಪಾದ ನೀರು, ಪಾನಕ, ಜ್ಯೂಸ್​​ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಲಿಂಬು ಪಾನಕವನ್ನು ಬಹುತೇಕರು ಇಷ್ಟಪಡುತ್ತಾರೆ. ಬೇಸಿಗೆಯ ಉಷ್ಣವನ್ನು ನೀಗಿಸಿ, ದೇಹವನ್ನು ಹೈಡ್ರೇಟ್​ ಆಗಿಡುವ ಅದ್ಭುತ ಪಾನೀಯ ಇದು. ಹೀಗಾಗಿ ಲಿಂಬೆ ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ದೇಶದ ಕೆಲ ನಗರಗಳಲ್ಲಿ ನಿಂಬೆ ಹಣ್ಣಿನ ಬೆಲೆ ಪ್ರತಿ ಕೆ.ಜಿ.ಗೆ 250ರಿಂದ 280 ರೂಪಾಯಿಗೆ ಏರಿಕೆಯಾಗಿದೆ. ಲಿಂಬೆ ಹಣ್ಣಿಗೆ ಬಾರಿ ಬೆಲೆ ಬರುತ್ತಿದ್ದಂತೆ, ಕಳ್ಳರ ದೃಷ್ಟಿ ಲಿಂಬೆಹಣ್ಣಿನ ಮೇಲೆ ಬಿದ್ದಿದೆ.

ಬಜಾರಿಯಾದಲ್ಲಿ 60 ಕೆಜಿ ಲಿಂಬೆ ಕಳವು
ಉತ್ತರ ಪ್ರದೇಶದ ಶಹಜಾನ್​ಪುರದ ಬಜಾರಿಯಾ ಎಂಬಲ್ಲಿ ತರಕಾರಿ ವ್ಯಾಪಾರಿಯೊಬ್ಬರು ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ 60 ಕೆಜಿ ಲಿಂಬೆಹಣ್ಣನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದರೊಂದಿಗೆ 40 ಕೆಜಿ ಈರುಳ್ಳಿ, 38 ಕೆಜಿ ಬೆಳ್ಳುಳ್ಳಿ ಕೂಡ ಕಳವಾಗಿದೆ. ಈ ಬಗ್ಗೆ ಶಹಜಾನ್​ಪುರ ಜಿಲ್ಲೆಯ ಟಿಲ್ಲಹರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 380 ರಡಿ ಕೇಸ್ ದಾಖಲಿಸಿ ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ. ಅಂದಹಾಗೇ, ಹೀಗೆ 60 ಕೆಜಿಗಳಷ್ಟು ಲಿಂಬೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಕಳೆದುಕೊಂಡವರು ಮನೋಜ್ ಕಶ್ಯಪ್​ ಎಂಬ ತರಕಾರಿ ವ್ಯಾಪಾರಿ.

ಬರೇಲಿಯಲ್ಲೂ ಕಳವು
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ದೀಲ್​ಪೀರ್​ ಮಾರುಕಟ್ಟೆಯಿಂದ ಕಳ್ಳರು 50 ಕೆಜಿಗಳಷ್ಟು ಲಿಂಬೆಹಣ್ಣು ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪೊಲೀಸರು ಮಾರ್ಕೆಟ್​ ಬಳಿ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವುದೇ ಬೆಳೆಯ ಬೆಲೆ ಕುಸಿತವಾದರೆ ವ್ಯಾಪಾರಿಗಳು, ರೈತರು ಪರಿತಪಿಸುತ್ತಾರೆ. ಆದರೆ ಹೀಗೆ ಬೆಲೆ ಏರಿಕೆಯಾದರೆ ಅವುಗಳನ್ನು ಕಾಪಾಡಿಕೊಳ್ಳುವುದೂ ದೊಡ್ಡ ಸವಾಲಾಗಿರುತ್ತದೆ.

ವರದಿ-ಚಂದ್ರಮೋಹನ್

Published On - 11:57 am, Thu, 14 April 22