ದೆಹಲಿ: ಪೂರ್ವ ಲಡಾಖ್ನ ಗೊಗ್ರಾ ಪ್ರದೇಶದಿಂದ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಸರ್ಕಾರಗಳು ಒಪ್ಪಿಕೊಂಡಿವೆ. ಈ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ (Line of Actual Control – LAC) ಯಥಾಸ್ಥಿತಿ ಕಾಪಾಡಿಕೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ ಎಂದು ಶುಕ್ರವಾರ ಭಾರತ ಸರ್ಕಾರದ ಪತ್ರಿಕಾ ಹೇಳಿಕೆ ತಿಳಿಸಿದೆ. ಎರಡೂ ದೇಶಗಳ ನಡುವೆ ಈಚೆಗೆ ನಡೆದ ಮಾತುಕತೆಯ ನಂತರ ಈ ಮಹತ್ವದ ಘೋಷಣೆ ಹೊರಬಿದ್ದಿದೆ.
ಮಾತುಕತೆಯ ನಂತರದ ಬೆಳವಣಿಗೆ ಕುರಿತು ಮಾಹಿತಿ ನೀಡಿರುವ ಸರ್ಕಾರವು, ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡ ನಂತರ ನಿರ್ಮಿಸಿದ್ದ ಎಲ್ಲ ತಾತ್ಕಾಲಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದೆ. ಗೊಗ್ರಾ ಕುರಿತ ನಿರ್ಣಯ ಅಂಗೀಕಾರದ ನಂತರ ಭಾರತ ಮತ್ತು ಚೀನಾ 6 ಸಂಘರ್ಷ ಸ್ಥಳಗಳ ಪೈಕಿ 4ರ ಬಗ್ಗೆ ನಿರ್ಣಯಕ್ಕೆ ಬಂದಂತೆ ಆಗಿದೆ. ಗಾಲ್ವಾನ್, ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳ ವಿವಾದದ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಡೆಸ್ಪಾಂಗ್ ಮತ್ತು ಹಾಟ್ಸ್ಪ್ರಿಂಗ್ಸ್ ಪ್ರದೇಶದಲ್ಲಿ ಸೇನಾ ನಿಯೋಜನೆ, ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ.
ಈ ವಾರದ ಆರಂಭದಲ್ಲಿ ನಿರ್ಣಯವಾಗಿದ್ದಂತೆ ಭಾರತ ಮತ್ತು ಚೀನಾ ಸೇನೆಗಳ ಕಾರ್ಪ್ಸ್ ಕಮಾಂಡರ್ ಹಂತದ ಅಧಿಕಾರಿಗಳ ಮಾತುಕತೆ 31ನೇ ಜುಲೈ 2021ರಂದು ನಡೆಯಿತು. ಪೂರ್ವ ಲಡಾಖ್ನ ಚುಶುಲ್ ಮೊಲ್ಡೊದಲ್ಲಿ ಸಭೆ ನಡೆಯಿತು. ಗಡಿ ಬಿಕ್ಕಟ್ಟಿನ ಬಗ್ಗೆ ಎರಡೂ ದೇಶಗಳ ಸೇನಾಧಿಕಾರಿಗಳು ಸುದೀರ್ಘ ಮಾತುಕತೆ ನಡೆಸಿದರು. ಮಾತುಕತೆಯ ಫಲಶ್ರುತಿಯಾಗಿ ಎರಡೂ ದೇಶಗಳು ಗೊಗ್ರಾ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಿದವು. ಕಳೆದ ವರ್ಷ ಮೇ ತಿಂಗಳ ಸಂಘರ್ಷದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡಿತ್ತು.
ಇದೀಗ ಎರಡೂ ದೇಶಗಳ ಉನ್ನತ ಸೇನಾಧಿಕಾರಿಗಳು ಸಹಮತದಿಂದ ಒಪ್ಪಿಕೊಂಡಿರುವ ಪ್ರಕಾರ ಹಲವು ಹಂತಗಳಲ್ಲಿ ಎರಡೂ ದೇಶಗಳು ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ. ಶಾಂತಿಕಾಲದ ನಿಯೋಜನಾ ಸ್ಥಳಗಳಿಗೆ ಸೇನಾ ತುಕಡಿಗಳನ್ನು ಸ್ಥಳಾಂತರಿಸಲಾಗುವುದು.
ಎಲ್ಲ ತಾತ್ಕಾಲಿಕ ನಿರ್ಮಾಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ತೆರವುಗೊಳಿಸಲಾಗುವುದು. ಈ ವಿಚಾರವನ್ನು ಉಭಯ ದೇಶಗಳ ಸೇನಾಧಿಕಾರಿಗಳು ಪರಸ್ಪರ ಪರಿಶೀಲಿಸಿ, ದೃಢಪಡಿಸಲಿದ್ದಾರೆ. ಇಲ್ಲಿನ ಭೂಪ್ರದೇಶವನ್ನು ಮತ್ತೆ ಮೊದಲಿದ್ದ ಸ್ಥಿತಿಗೆ ತರಲೂ ಎರಡೂ ದೇಶಗಳೂ ಒಪ್ಪಿಕೊಂಡಿವೆ.
ವಾಸ್ತವ ನಿಯಂತ್ರಣ ರೇಖೆಯನ್ನು ಎರಡೂ ದೇಶಗಳು ಗಸ್ತು ನಡೆಸಲಿವೆ, ಗೌರವಿಸಲಿವೆ. ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವುದಿಲ್ಲ. ಈ ಬೆಳವಣಿಗೆಯೊಂದಿಗೆ ಚೀನಾ ಗಡಿಯ ಸೂಕ್ಷ್ಮ ಪ್ರದೇಶವೊಂದರಲ್ಲಿ ಸೇನಾ ಮುಖಾಮುಖಿ, ಉದ್ವಿಗ್ನತೆ ಶಮನಗೊಂಡಂತೆ ಆಗಿದೆ. ಮಾತುಕತೆ ಮುಂದುವರಿಸಲು ಮತ್ತು ವಾಸ್ತವ ನಿಯಂತ್ರಣ ರೇಖೆಯ ಪಶ್ಚಿಮ ವಲಯದಲ್ಲಿರುವ ಇತರ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಭಾರತೀಯ ಸೇನೆಯು ಗಡಿಯ ಗಸ್ತು ಮುಂದುವರಿಸಲಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಕಾಪಾಡಲು ಸದಾ ಶ್ರಮಿಸಲಿವೆ ಎಂದು ಭಾರತ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
(Line of Actual Control India China Disengage In Gogra of Eastern Ladakh)
ಇದನ್ನೂ ಓದಿ: ಲಡಾಖ್ ತಲುಪಿದ ಭಾರತೀಯ ಸೇನೆಯ ದಾಳಿಪಡೆ: ಇದು ಮಹತ್ವದ ಕಾರ್ಯತಂತ್ರಕ್ಕೆ ಮುನ್ನುಡಿ
ಇದನ್ನೂ ಓದಿ: ಲಡಾಖ್ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ