Lok Sabha Election: ನಾಣ್ಯಗಳಲ್ಲೇ ₹ 25,000 ಭದ್ರತಾ ಠೇವಣಿ ನೀಡಿದ ಜಬಲ್‌ಪುರ ಪಕ್ಷೇತರ ಅಭ್ಯರ್ಥಿ

|

Updated on: Mar 21, 2024 | 1:24 PM

ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಜಿಟಲ್ ಅಥವಾ ಆನ್‌ಲೈನ್ ಪಾವತಿಗೆ ಅವಕಾಶವಿಲ್ಲದ ಕಾರಣ ನಾಣ್ಯಗಳನ್ನು ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಗುರಿ ಹೊಂದಿದ್ದೇನೆ ಎಂದು ವಿನಯ್ ಚಕ್ರವರ್ತಿ ಹೇಳಿದ್ದಾರೆ. ಚಕ್ರವರ್ತಿ ಅವರು ನಾಣ್ಯಗಳಲ್ಲಿ ಮಾಡಿದ ಪಾವತಿಯನ್ನು ಸ್ವೀಕರಿಸಲಾಗಿದೆ ಎಂದು ಜಬಲ್‌ಪುರ ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ.

Lok Sabha Election: ನಾಣ್ಯಗಳಲ್ಲೇ ₹ 25,000 ಭದ್ರತಾ ಠೇವಣಿ ನೀಡಿದ ಜಬಲ್‌ಪುರ ಪಕ್ಷೇತರ ಅಭ್ಯರ್ಥಿ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ ಮಾರ್ಚ್ 21: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಸ್ಪರ್ಧಿಸಲು ಉದ್ದೇಶಿಸಿರುವ ಜಬಲ್‌ಪುರ ನಿವಾಸಿಯೊಬ್ಬರು ನಾಮಪತ್ರವನ್ನು ಪಡೆಯಲು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದರು. ವಿನಯ್ ಚಕ್ರವರ್ತಿ (Vinay Chakraborty) ಎಂಬ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ಜಬಲ್‌ಪುರದಲ್ಲಿ (Jabalpur) ಚುನಾವಣಾ ಅಖಾಡಕ್ಕೆ ಪ್ರವೇಶಿಸಲು 25,000 ರೂಪಾಯಿಗಳ ಭದ್ರತಾ ಠೇವಣಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಇವರು ಈ ಹಣ ನೀಡಿದ್ದು ನಾಣ್ಯಳಲ್ಲಿ. 10, 5 ಮತ್ತು 2 ರೂಪಾಯಿ ಮುಖಬೆಲೆಯ 25,000 ರೂ.ಗಳನ್ನು ಪಾವತಿಸಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿನಯ್ ಚಕ್ರವರ್ತಿ ನಾಣ್ಯಗಳಲ್ಲೇ ಪಾವತಿಸಿದ್ದು ಯಾಕೆ?

ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಜಿಟಲ್ ಅಥವಾ ಆನ್‌ಲೈನ್ ಪಾವತಿಗೆ ಅವಕಾಶವಿಲ್ಲದ ಕಾರಣ ನಾಣ್ಯಗಳನ್ನು ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಗುರಿ ಹೊಂದಿದ್ದೇನೆ ಎಂದು ವಿನಯ್ ಚಕ್ರವರ್ತಿ ಹೇಳಿದ್ದಾರೆ. ಚಕ್ರವರ್ತಿ ಅವರು ನಾಣ್ಯಗಳಲ್ಲಿ ಮಾಡಿದ ಪಾವತಿಯನ್ನು ಸ್ವೀಕರಿಸಲಾಗಿದೆ ಎಂದು ಜಬಲ್‌ಪುರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಕಲೆಕ್ಟರ್ ದೀಪಕ್ ಕುಮಾರ್ ಸಕ್ಸೇನಾ ಖಚಿತಪಡಿಸಿದ್ದಾರೆ. ಅವರಿಗೆ ಪಾವತಿಯ ರಶೀದಿಯನ್ನು ನೀಡಲಾಗಿದೆ.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಏಪ್ರಿಲ್ 19 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವ್ಯಾಪಿಸಿರುವ 102 ಸಂಸದೀಯ ಕ್ಷೇತ್ರಗಳಿಗೆ ನಾಮನಿರ್ದೇಶನ ಪ್ರಕ್ರಿಯೆಯು ಅಧಿಸೂಚನೆಯನ್ನು ಹೊರಡಿಸುವುದರೊಂದಿಗೆ ಬುಧವಾರ ಪ್ರಾರಂಭವಾಯಿತು.

ರಾಷ್ಟ್ರಪತಿಗಳ ಪರವಾಗಿ ಚುನಾವಣಾ ಆಯೋಗವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ನಾಮಪತ್ರ ಸಲ್ಲಿಸಲು ಮಾರ್ಚ್ 27 ಕೊನೆಯ ದಿನಾಂಕವಾಗಿದೆ. ಆದರೆ ಮುಂಬರುವ ಹಬ್ಬದ ಕಾರಣ, ಲೋಕಸಭೆ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮಾರ್ಚ್ 28 ಅಂತಿಮ ದಿನವೆಂದು ನಿಗದಿಪಡಿಸಲಾಗಿದೆ. ಬಿಹಾರದಲ್ಲಿ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದೆ. ಬಿಹಾರ ತನ್ನ 40 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಆರಂಭಿಕ ಹಂತದಲ್ಲಿ ಮತದಾನ ನಡೆಸಲಿದೆ.

ಬಹು ನಿರೀಕ್ಷಿತ ಸಾರ್ವತ್ರಿಕ ಚುನಾವಣೆಗಳಿಗಾಗಿ ಮಧ್ಯಪ್ರದೇಶ ಏಪ್ರಿಲ್ 19 ರಿಂದ ನಾಲ್ಕು ಹಂತಗಳಲ್ಲಿ ಮತದಾನ ಮಾಡಲಿದೆ. ಮಧ್ಯಪ್ರದೇಶದ ಅರ್ಧ ಡಜನ್ ಸ್ಥಾನಗಳಿಗೆ (ಸಿಧಿ, ಶಹದೋಲ್, ಜಬಲ್‌ಪುರ್, ಮಂಡ್ಲಾ, ಬಾಲಘಾಟ್, ಚಿಂದ್ವಾರ) ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ಸಾಧ್ಯವಿಲ್ಲ: ಸುಪ್ರೀಂ

ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನಾಲ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 29 ಲೋಕಸಭಾ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಗುರಿ ಹೊಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸೋತ ಏಕೈಕ ಕ್ಷೇತ್ರವಾದ ಛಿಂದ್ವಾರಾ ಕ್ಷೇತ್ರವನ್ನು ಮತ್ತೆ ಪಡೆಯಲು ಬಿಜೆಪಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ