ಲೋಕಸಭಾ ಚುನಾವಣೆ 2024: ಬಿಜೆಪಿ 220 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದ ಕೇಜ್ರಿವಾಲ್
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 220 ಸ್ಥಾನಗಳನ್ನು ಗಳಿಸಬಹುದು ಆದರೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮದ್ಯನೀತಿ ಹಗರಣದಲ್ಲಿ ಜೈಲುಪಾಲಾಗಿ ಸದ್ಯ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 220 ಸ್ಥಾನಗಳನ್ನು ಗೆಲ್ಲಬಹುದು ಆದರೆ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ದಿನದ ನಂತರ ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಧಾನ ಕಛೇರಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಕಳೆದ 20 ಗಂಟೆಗಳಲ್ಲಿ ನಾನು ಚುನಾವಣಾ ತಜ್ಞರು ಮತ್ತು ಜನರೊಂದಿಗೆ ಮಾತನಾಡಿದ್ದೇನೆ ಮತ್ತು ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂಬುದನ್ನು ತಿಳಿದುಕೊಂಡಿದ್ದೇನೆ ಎಂದರು.
ಹರ್ಯಾಣ, ರಾಜಸ್ಥಾನ, ಕರ್ನಾಟಕ, ದೆಹಲಿ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಲೋಕಸಭಾ ಸ್ಥಾನಗಳು ಕಡಿಮೆಯಾಗಲಿವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಯಾವುದೇ ರಾಜ್ಯದಲ್ಲಿ ಅವರ ಸ್ಥಾನಗಳು ಹೆಚ್ಚಾಗುವುದಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಭ್ರಷ್ಟಾಚಾರದ ಅನಭಿಷಿಕ್ತ ದೊರೆ; ಬಿಜೆಪಿಯಿಂದ ಕೇಜ್ರಿವಾಲ್ ಫಿಲ್ಮಿ ಪೋಸ್ಟರ್ ರಿಲೀಸ್
ಇಂಡಿಯಾ ಬ್ಲಾಕ್ ಸರ್ಕಾರ ರಚನೆಯಾದಾಗ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು 75 ನೇ ವರ್ಷಕ್ಕೆ ಕಾಲಿಟ್ಟ ನಂತರ ಕೇಂದ್ರ ಗೃಹ ಸಚಿವರೇ ತಮ್ಮ ಉತ್ತರಾಧಿಕಾರಿಯಾಗುತ್ತಾರೆ ಎಂದು ಹೇಳುವ ಮೂಲಕ ಅಮಿತ್ ಶಾ ಅವರಿಗೆ ಮತ ಕೇಳುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 am, Sun, 12 May 24