ಲೋಕಸಭೆ ಸ್ಪೀಕರ್ ಚುನಾವಣೆ; ನಾಳೆ ಸದನಕ್ಕೆ ಹಾಜರಾಗುವಂತೆ ಬಿಜೆಪಿ, ಕಾಂಗ್ರೆಸ್ ಸಂಸದರಿಗೆ ವಿಪ್ ಜಾರಿ

|

Updated on: Jun 25, 2024 | 9:05 PM

Lok Sabha Speaker Election: ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು ಸ್ಪೀಕರ್ ಹುದ್ದೆಗೆ ಚುನಾವಣೆಗಳು ಸಾಮಾನ್ಯವಾಗಿದ್ದರೂ, ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಸ್ವತಂತ್ರ ಭಾರತದಲ್ಲಿ ಕೇವಲ 3 ಬಾರಿ ಸಚುನಾವಣೆ ಏರ್ಪಡಿಸಲಾಗಿತ್ತು. ಇದುವರೆಗೂ 1952, 1967 ಮತ್ತು 1976 ರಲ್ಲಿ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ನಡೆದಿದೆ. ಇದೀಗ ಬುಧವಾರ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಲೋಕಸಭೆ ಸ್ಪೀಕರ್ ಚುನಾವಣೆ; ನಾಳೆ ಸದನಕ್ಕೆ ಹಾಜರಾಗುವಂತೆ ಬಿಜೆಪಿ, ಕಾಂಗ್ರೆಸ್ ಸಂಸದರಿಗೆ ವಿಪ್ ಜಾರಿ
ಲೋಕಸಭಾ ಅಧಿವೇಶನ
Follow us on

ನವದೆಹಲಿ: ನಾಳೆ (ಬುಧವಾರ) ಲೋಕಸಭಾ ಸ್ಪೀಕರ್ ಹುದ್ದೆಯ ಚುನಾವಣೆ (Lok Sabha Speaker Election)  ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ (BJP) ತನ್ನ ಸಂಸದರಿಗೆ ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಸದನದಲ್ಲಿ ಇರುವಂತೆ 3 ಸಾಲಿನ ವಿಪ್ (Whip) ಜಾರಿಗೊಳಿಸಿದೆ. ಲೋಕಸಭೆಯ ಸ್ಪೀಕರ್ ಹುದ್ದೆಗೆ ಜೂನ್ 26ರಂದು ಚುನಾವಣೆ ನಡೆಯಲಿದೆ. ಸಂಸತ್ತಿನ ಅಧಿವೇಶನದ ಮೂರನೇ ದಿನವಾದ ನಾಳೆ ಸ್ಪೀಕರ್ ಸ್ಥಾನಕ್ಕೆ ಅಪರೂಪದ ಚುನಾವಣೆಗೆ ಲೋಕಸಭೆ ಸಾಕ್ಷಿಯಾಗಲಿದೆ. 1976ರ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷವು ತನ್ನ ಸಂಸದರಿಗೆ ಬುಧವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಗೆ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ. “ನಾಳೆ ಅಂದರೆ ಜೂನ್ 26ರಂದು ಲೋಕಸಭೆಯಲ್ಲಿ ಬಹಳ ಮುಖ್ಯವಾದ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು. ಲೋಕಸಭೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಸದನದಲ್ಲಿ ಬೆಳಿಗ್ಗೆ 11ರಿಂದ ಇರಲೇಬೇಕು”ಎಂದು ಕಾಂಗ್ರೆಸ್ ನಾಯಕ ಕೆ. ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: Bhartruhari Mahtab: ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಭರ್ತೃಹರಿ ಮಹತಾಬ್ ನೇಮಕ

ಲೋಕಸಭೆಯ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ನೇಮಿಸುವ ಕುರಿತು ಒಮ್ಮತಕ್ಕೆ ಬರಲು ವಿಫಲವಾದ ಪ್ರತಿಪಕ್ಷ ಇಂಇಯಾ ಬ್ಲಾಕ್ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಈ ಹಿಂದೆ ಪ್ರತಿಪಕ್ಷಗಳು ಉಪಸಭಾಪತಿ ಪಾತ್ರದ ಬಗ್ಗೆ ಬಿಜೆಪಿಯಿಂದ ಸ್ಪಷ್ಟನೆ ಕೇಳಿದ್ದರು. ಆದರೆ, ಅದಕ್ಕೆ ಸ್ಪಷ್ಟ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಕೆ. ಸುರೇಶ್ ಅವರ ಹೆಸರನ್ನು ಸೂಚಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿಯು ಈ ಹಿಂದೆ 17ನೇ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದ ಕೋಟಾ ಸಂಸದ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ. ಹಿಂದಿನ ಚರ್ಚೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪ್ರಸ್ತಾವನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರವಾನಿಸಲಾಯಿತು, ಉಪಸಭಾಪತಿ ಪಾತ್ರವನ್ನು ಪ್ರತಿಪಕ್ಷಗಳಿಗೆ ನೀಡಬೇಕೆಂಬ ಷರತ್ತಿನಡಿಯಲ್ಲಿ ಪ್ರತಿಪಕ್ಷಗಳು ಎನ್‌ಡಿಎಯ ಸ್ಪೀಕರ್ ಅಭ್ಯರ್ಥಿಯನ್ನು ಬೆಂಬಲಿಸಲು ಸಿದ್ಧವಾಗಿವೆ ಎಂದು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಬುಧವಾರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಭಾರತದ ಸಂವಿಧಾನದ ಪ್ರಕಾರ, ಹೊಸದಾಗಿ ಚುನಾಯಿತವಾದ ಲೋಕಸಭೆಯು ತನ್ನ ಮೊದಲ ಅಧಿವೇಶನಕ್ಕೆ ಸೇರುವ ಮೊದಲು ಸ್ಪೀಕರ್ ಹುದ್ದೆಯು ಖಾಲಿಯಾಗುತ್ತದೆ. ಹೊಸದಾಗಿ ಚುನಾಯಿತ ಸಂಸತ್ತಿನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದು ಸೇರಿದಂತೆ ಆರಂಭಿಕ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಅಧ್ಯಕ್ಷರು ಹಂಗಾಮಿ ಸ್ಪೀಕರ್ ಅನ್ನು ನೇಮಿಸುತ್ತಾರೆ. ಇದರ ನಂತರ, ಲೋಕಸಭೆಯು ಸರಳ ಬಹುಮತದ ಮತದಿಂದ ಹೊಸ ಸ್ಪೀಕರ್ ಅನ್ನು ಆಯ್ಕೆ ಮಾಡುತ್ತದೆ.

ಇದನ್ನೂ ಓದಿ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್​ಡಿಎಯಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕೆ ಸುರೇಶ್​ ನಾಮಪತ್ರ ಸಲ್ಲಿಕೆ

ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಲು ಯಾವುದೇ ನಿರ್ದಿಷ್ಟ ಅರ್ಹತೆಗಳ ಅಗತ್ಯವಿಲ್ಲದಿದ್ದರೂ ಸಂವಿಧಾನ ಮತ್ತು ಸಂಸದೀಯ ನಿಯಮಗಳ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಳೆದ 2 ಲೋಕಸಭಾ ಅಧಿವೇಶನಗಳಲ್ಲಿ, ಬಹುಮತವನ್ನು ಹೊಂದಿದ್ದ ಬಿಜೆಪಿ 2014 ಮತ್ತು 2019ರಲ್ಲಿ ಕ್ರಮವಾಗಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಅವರನ್ನು ಸ್ಪೀಕರ್‌ಗಳಾಗಿ ನೇಮಿಸಿತು. ಇಬ್ಬರೂ ನಾಯಕರನ್ನು ಅವರ ವ್ಯಾಪಕ ಅನುಭವ ಮತ್ತು ಸಂಸದೀಯ ಕಾರ್ಯವಿಧಾನಗಳ ಜ್ಞಾನದ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ