ಲೋಕಾಯುಕ್ತ ದಾಳಿ ವೇಳೆ ಅರಣ್ಯಾಧಿಕಾರಿ ಮನೆಯಲ್ಲಿ ಖಜಾನೆಯೇ ಪತ್ತೆ: 2.5 ಕೆ.ಜಿ ಚಿನ್ನ, 1.6 ಕೆ.ಜಿ ಬೆಳ್ಳಿ ವಶಕ್ಕೆ
ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹26.36 ಲಕ್ಷ ನಗದು, 2.5 ಕೆ.ಜಿ ಚಿನ್ನ, 1.6 ಕೆ.ಜಿ ಬೆಳ್ಳಿ ಹಾಗೂ ₹7.6 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಸದ್ಯ ಪತ್ತೆಯಾಗಿರುವ ಆಸ್ತಿಗಳ ಪ್ರಾಥಮಿಕ ಮೌಲ್ಯ ಸುಮಾರು 7.6 ಕೋಟಿ ರೂಪಾಯಿ ಎಂದು ಲೋಕಾಯುಕ್ತ ಅಂದಾಜಿಸಿದೆ. ಇದು ಅಧಿಕಾರಿ ಆದಾಯದ ಮೂಲಗಳಿಗಿಂತ ಶೇ.560ರಷ್ಟು ಹೆಚ್ಚು ಎನ್ನಲಾಗಿದೆ.

ಭೋಪಾಲ್, ನವೆಂಬರ್ 15: ಹುಲಿ ಸಂರಕ್ಷಿತ ಅರಣ್ಯದ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಸಿಬ್ಬಂದಿ ಅಧಿಕಾರಿ ಬಳಿ ಇದ್ದ ಖಜಾನೆ ಕಂಡು ಹೌಹಾರಿದ್ದಾರೆ. ಲೋಕಾಯುಕ್ತದ ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯ ವೇಳೆ 26,36,800 ರೂಪಾಯಿ ನಗದು ಪತ್ತೆಯಾಗಿದೆ. ಜೊತೆಗೆ ಸುಮಾರು 3.5 ಕೋಟಿ ರೂಪಾಯಿ ಮೌಲ್ಯದ 2.528 ಕೆ.ಜಿ ಚಿನ್ನ ಮತ್ತು 2.94 ಲಕ್ಷ ರೂಪಾಯಿ ಮೌಲ್ಯದ 1.656 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ
ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕ ಸಂಜೀವ್ ಕುಮಾರ್ ಶರ್ಮಾ ತಮ್ಮ ಪತ್ನಿ ಹಾಗೂ ಇತರರೊಂದಿಗೆ ಸೇರಿ ಕಾನೂನುಬದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ದೂರು ಬಂಧಿತ್ತು. ಪ್ರಾಥಮಿಕ ವಿಚಾರಣೆಯಲ್ಲಿ ಅವರ ಆಸ್ತಿ ತಿಳಿದಿರುವ ಆದಾಯಕ್ಕಿಂತ ಶೇ.228ರಷ್ಟು ಹೆಚ್ಚಾಗಿದೆ ಎಂಬ ಅಂಶ ಬೆಳಕಿಗೆ ಬಂದ ಕಾರಣ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ನಂತರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ: ಕೇಳುಗನೊಬ್ಬ ಸಾಕು, ಆಯುಧವೇ ಇಲ್ಲದೆ ನಡೆಯುತ್ತೆ ಸೈಬರ್ ವಂಚನೆ
ವಾಹನ, ಗೃಹೋಪಯೋಗಿ ವಸ್ತುಗಳು ಜಪ್ತಿ
ಭೋಪಾಲ್ ವಿಭಾಗದ ಲೋಕಾಯುಕ್ತ ತಂಡಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದು, ಪಚ್ಮಢಿಯಲ್ಲಿರುವ ಶರ್ಮಾ ಅವರ ಸರ್ಕಾರಿ ನಿವಾಸ ಮತ್ತು ಕಚೇರಿ ಹಾಗೂ ಛಿಂದ್ವಾರದಲ್ಲಿರುವ ಖಾಸಗಿ ನಿವಾಸದ ಮೇಲೆ ಶೋಧ ನಡೆಸಿವೆ. ನಾಲ್ಕು ವಾಹನಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಸ್ಕಾರ್ಪಿಯೋ, ಮಹೀಂದ್ರಾ KUV, ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತು ಸ್ಕೂಟರ್ ಸೇರಿವೆ. ಈ ವಾಹನಗಳ ಒಟ್ಟು ಮೌಲ್ಯ ಸುಮಾರು 31.2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಕೂಡ ದಾಳಿ ವೇಳೆ ಕಂಡುಬಂದಿವೆ. ಇದಲ್ಲದೆ, ಶರ್ಮಾ ಅವರಿಗೆ ಸಂಬಂಧಿಸಿದ ಮತ್ತೆರಡು ಆಸ್ತಿಗಳ ವಿವರಗಳು ತನಿಖೆಯಲ್ಲಿ ಲಭ್ಯವಾಗಿವೆ. ಸುಮಾರು 2 ಕೋಟಿ ರೂಪಾಯಿ ಮೌಲ್ಯದ ‘ಇಕೋಟೆಲ್ ರೆಸಾರ್ಟ್’ ಮತ್ತು 1 ಕೋಟಿ ರೂಪಾಯಿ ಮೌಲ್ಯದ ‘ಸೆರೆನಿಟಿ ದಿ ವಿಲ್ಲಾ’ ಎಂಬ ಆಸ್ತಿಗಳಿರುವುದು ಪತ್ತೆಯಾಗಿದೆ.
ಶೇ.560ರಷ್ಟು ಹೆಚ್ಚಿನ ಆದಾಯ ಪತ್ತೆ
ಭೂ ವ್ಯವಹಾರಗಳಿಗೆ ಸಂಬಂಧಿಸಿದ 28 ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೋಟೆಲ್ ಮತ್ತು ರೆಸಾರ್ಟ್‌ಗಳ ಅಧಿಕೃತ ಮೌಲ್ಯಮಾಪನ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಒಟ್ಟು ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಪತ್ತೆಯಾಗಿರುವ ಆಸ್ತಿಗಳ ಪ್ರಾಥಮಿಕ ಮೌಲ್ಯ ಸುಮಾರು 7.6 ಕೋಟಿ ರೂಪಾಯಿ ಎಂದು ಲೋಕಾಯುಕ್ತ ಅಂದಾಜಿಸಿದೆ. ಇದು ಶರ್ಮಾ ಅವರ ಆದಾಯದ ಮೂಲಗಳಿಗಿಂತ ಶೇ.560ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದು ಪ್ರಾಥಮಿಕ ಅಂದಾಜು ಮಾತ್ರವಾಗಿದ್ದು, ಭೂ ವ್ಯವಹಾರಗಳ ದಾಖಲೆಗಳ ಪರಿಶೀಲನೆ ಹಾಗೂ ಹೋಟೆಲ್ ಮತ್ತು ರೆಸಾರ್ಟ್‌ಗಳ ಅಧಿಕೃತ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಲೋಕಾಯುಕ್ತ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 am, Sun, 15 November 26




