
ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ (Anil Chauhan) ಅವರು ಇಂದು ಪುಣೆ ವಿಶ್ವವಿದ್ಯಾಲಯದಲ್ಲಿ ಭವಿಷ್ಯದ ಯುದ್ಧಗಳು ಕುರಿತು ಉಪನ್ಯಾಸ ನೀಡಿದ್ದು, ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಅನುಭವಿಸಿದ ನಷ್ಟಗಳು ಮುಖ್ಯವಲ್ಲ, ಅದರ ಫಲಿತಾಂಶ ಮಾತ್ರ ಮುಖ್ಯ ಎಂದು ಹೇಳಿದ್ದಾರೆ. “ನಷ್ಟಗಳು ಮುಖ್ಯವಲ್ಲ. ಕಾರ್ಯಾಚರಣೆಯ ಫಲಿತಾಂಶ ಮಾತ್ರ ಮುಖ್ಯ” ಎಂದು ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಈ ಬಗ್ಗೆ ಸಿಂಗಾಪುರದಲ್ಲಿ ಅವರ ಹಿಂದಿನ ಹೇಳಿಕೆಗಳು ರಾಜಕೀಯ ವಿವಾದವನ್ನು ಹುಟ್ಟುಹಾಕಿದ ಕೆಲವು ದಿನಗಳ ನಂತರ ಅನಿಲ್ ಚೌಹಾಣ್ ಮತ್ತೊಮ್ಮೆ ಭಾರತೀಯ ಸೇನೆಗಾದ ನಷ್ಟದ ಬಗ್ಗೆ ಮಾತನಾಡಿದ್ದಾರೆ. ಕ್ರೂರ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರದ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ.
ಪಹಲ್ಗಾಮ್ ಘಟನೆಯನ್ನು ಪ್ರತಿಬಿಂಬಿಸುತ್ತಾ ಜನರಲ್ ಅನಿಲ್ ಚೌಹಾಣ್ ಇದನ್ನು “ಗಂಭೀರ ಕ್ರೌರ್ಯ” ಎಂದು ಕರೆದಿದ್ದಾರೆ. ಬಲಿಪಶುಗಳ ಕುಟುಂಬಗಳು ಮತ್ತು ಮಕ್ಕಳ ಮುಂದೆ ಅವರ ತಲೆಗೆ ಹೇಗೆ ಗುಂಡು ಹಾರಿಸಲಾಯಿತು ಎಂಬುದನ್ನು ವಿವರಿಸಿದರು. “ಧರ್ಮದ ಹೆಸರಿನಲ್ಲಿ ಅವರ ಮೇಲೆ ಗುಂಡು ಹಾರಿಸಲಾಯಿತು. ಇದು ಈ ಆಧುನಿಕ ಜಗತ್ತಿಗೆ ಸ್ವೀಕಾರಾರ್ಹವಲ್ಲ. ಇದು ಸಮಾಜದಲ್ಲಿ ಭಾರಿ ಅಸಹ್ಯವನ್ನು ಉಂಟುಮಾಡಿತು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದು ನಿಜ; ಮೊದಲ ಬಾರಿ ಒಪ್ಪಿಕೊಂಡ ಭಾರತ
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಜನರಲ್ ಅನಿಲ್ ಚೌಹಾಣ್, “ಪಾಕಿಸ್ತಾನವು ಭಾರತವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಒತ್ತೆಯಾಳಾಗಿ ಇರಿಸಿಕೊಳ್ಳಲು ಸಾಧ್ಯವಾಗಬಾರದು” ಎಂದು ಹೇಳಿದರು.
ಪಾಕಿಸ್ತಾನದಿಂದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಬೇಕು ಎಂಬ ನಂಬಿಕೆಯಲ್ಲಿ ಆಪರೇಷನ್ ಸಿಂಧೂರ್ ಬೇರೂರಿದೆ ಎಂದು ಅವರು ಹೇಳಿದರು. “ಭಯೋತ್ಪಾದನೆ ಮತ್ತು ಪರಮಾಣು ಬೆದರಿಕೆಯ ನೆರಳಿನಲ್ಲಿ ಭಾರತ ಬದುಕುವುದಿಲ್ಲ” ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: ಆಪರೇಷನ್ ಸಿಂಧೂರ್‌ನಿಂದ ಪಾಕಿಸ್ತಾನಕ್ಕೆ ಭಾರತ ಹೇಳಿದ್ದಕ್ಕಿಂತ ಹೆಚ್ಚು ಹಾನಿ; ಇಸ್ಲಮಾಬಾದ್ನ ದಾಖಲೆಯಲ್ಲೇನಿದೆ?
ಈ ಹಿಂದೆ ಸಿಂಗಾಪುರದಲ್ಲಿ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರ್‌ನ ಆರಂಭಿಕ ಹಂತದಲ್ಲಿ ಅನಿರ್ದಿಷ್ಟ ಸಂಖ್ಯೆಯ ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಉನ್ನತ ಮಿಲಿಟರಿ ಜನರಲ್ ಮೊದಲ ಬಾರಿಗೆ ಒಪ್ಪಿಕೊಂಡಿದ್ದರು. ಆದರೆ, ಸಶಸ್ತ್ರ ಪಡೆಗಳು ತಮ್ಮ ತಪ್ಪುಗಳನ್ನು ತಕ್ಷಣ ಸರಿಪಡಿಸಿಕೊಂಡು ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಯಿತು ಎಂದು ಅವರು ಹೇಳಿದ್ದರು. ಆದರೆ, 4 ರಫೇಲ್‌ಗಳು ಸೇರಿದಂತೆ 6 ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನ ಪ್ರಧಾನಿಯ ಹೇಳಿಕೆಯನ್ನು ಅವರು “ಸಂಪೂರ್ಣವಾಗಿ ತಪ್ಪು” ಎಂದು ತಳ್ಳಿಹಾಕಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ