ಎಣ್ಣೆಯ ಟ್ಯಾಂಕರ್ ಪಲ್ಟಿ; ಚಾಲಕನಿಗೆ ಸಹಾಯ ಮಾಡೋದು ಬಿಟ್ಟು ಪಾತ್ರೆಗಳಲ್ಲಿ ಆಯಿಲ್ ತುಂಬಿಕೊಂಡ ಜನ!
ಉತ್ತರ ಪ್ರದೇಶದ ಅಮೇಥಿಯಲ್ಲಿ ಟ್ಯಾಂಕರ್ ಮಗುಚಿದ ನಂತರ ರಿಫೈನ್ಡ್ ಆಯಿಲ್ ಇಡೀ ರಸ್ತೆಯ ತುಂಬ ಚೆಲ್ಲಿ ಹೋಗಿತ್ತು. ಗ್ರಾಮಸ್ಥರು ಚಾಲಕನನ್ನು ಆಸ್ಪತ್ರೆಗೆ ಸೇರಿಸುವ ಬದಲು ಕೈಗೆ ಸಿಕ್ಕ ಪಾತ್ರೆಗಳಲ್ಲಿ ಅಡುಗೆ ಎಣ್ಣೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ. ವಾರಣಾಸಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಕಥೋರಾ ಗ್ರಾಮದಲ್ಲಿ ಟ್ಯಾಂಕರ್ ಪಲ್ಟಿಯಾಗಿ ತೈಲ ಸೋರಿಕೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ಅದನ್ನು ಲೂಟಿ ಮಾಡಿದ್ದಾರೆ.
ಅಮೇಥಿ, ಜೂನ್ 3: ಉತ್ತರ ಪ್ರದೇಶದ ಅಮೇಥಿಯ (Amethi) ವಾರಾಣಸಿ-ಲಕ್ನೋ ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ತುಂಬಿದ್ದ ಟ್ಯಾಂಕರ್ (Oil Tanker) ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ, ಆತನ ಸಹಾಯಕ್ಕೆ ಬಾರದ ಸ್ಥಳೀಯ ಗ್ರಾಮಸ್ಥರು ಮನೆಗೆ ಓಡಿಹೋಗಿ, ಸಿಕ್ಕ ಪಾತ್ರೆ, ಬಕೆಟ್ಗಳನ್ನೆಲ್ಲ ತಂದು ರಸ್ತೆಯಲ್ಲಿ ಚೆಲ್ಲಿದ್ದ ಎಣ್ಣೆಯನ್ನು ಲೂಟಿ ಮಾಡಿದ್ದಾರೆ. ಕೊನೆಗೆ ಪೊಲೀಸರೇ ಬಂದು ಗ್ರಾಮಸ್ಥರನ್ನು ಓಡಿಸಿ, ಟ್ಯಾಂಕರ್ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಇಂದು ಬೆಳಿಗ್ಗೆ ಅಮೇಥಿ ಜಿಲ್ಲೆಯ ಕಾಮರೌಲಿ ಪೊಲೀಸ್ ಠಾಣೆ ಪ್ರದೇಶದ ವಾರಾಣಸಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಥೋರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಸುಲ್ತಾನ್‌ಪುರದಿಂದ ಲಕ್ನೋಗೆ ಹೋಗುವ ದಾರಿಯಲ್ಲಿ ಸಂಸ್ಕರಿಸಿದ ತೈಲವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ನಂತರ ರಸ್ತೆ ಬದಿಗೆ ಉರುಳಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ಯಾಂಕರ್ ಪಲ್ಟಿಯಾದ ತಕ್ಷಣ, ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಟ್ಯಾಂಕರ್ ಚಾಲಕನನ್ನು ಉಳಿಸುವ ಬದಲು ಚೆಲ್ಲಿದ ಎಣ್ಣೆಯನ್ನು ತೆಗೆದುಕೊಂಡು ಹೋಗಲು ಗ್ರಾಮಸ್ಥರು ಡಬ್ಬಿಗಳು ಮತ್ತು ಬಕೆಟ್‌ಗಳೊಂದಿಗೆ ಸ್ಥಳಕ್ಕೆ ತಲುಪಿದರು. ಪಲ್ಟಿಯಾದ ಟ್ಯಾಂಕರ್ ಬಳಿಯ ಕೆಸರುಮಯ ರಸ್ತೆಯಲ್ಲಿ ಗ್ರಾಮಸ್ಥರು ತಮ್ಮ ಪಾತ್ರೆಗಳಲ್ಲಿ ಚೆಲ್ಲಿದ ಎಣ್ಣೆಯನ್ನು ತುಂಬುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ