4,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ರಣಹದ್ದು ಡಿಕ್ಕಿಯಾಗಿ ತುರ್ತು ಭೂಸ್ಪರ್ಶ; 175 ಪ್ರಯಾಣಿಕರು ಪಾರು
ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ರಣಹದ್ದು ಡಿಕ್ಕಿ ಹೊಡೆದ ನಂತರ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಪಾಟ್ನಾದಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ಏರ್‌ಬಸ್ A320 ವಿಮಾನವು ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ ಸುಮಾರು 10-12 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಕ್ಕಿ ಡಿಕ್ಕಿ ಹೊಡೆದಿದೆ. ಪೈಲಟ್ ತುರ್ತು ಭೂಸ್ಪರ್ಶ ಮಾಡಿ, ಎಲ್ಲಾ 175 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಏರ್ಪೋರ್ಟ್ ತಲುಪಿಸಿದ್ದಾರೆ. ವಿಮಾನಕ್ಕೆ ಹಾನಿಯಾಗಿದ್ದರೂ ವಿಮಾನದಲ್ಲಿದ್ದ ಎಲ್ಲರೂ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ.

ನವದೆಹಲಿ, ಜೂನ್ 2: ಇಂದು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ (IndiGo Flight) ರಣಹದ್ದು ಡಿಕ್ಕಿ ಹೊಡೆದ ನಂತರ ಸುಮಾರು 175 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಏರ್‌ಬಸ್ A320 ವಿಮಾನವು ಹಾನಿಗೊಳಗಾಗಿದ್ದರೂ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರು ಸುರಕ್ಷಿತವಾಗಿದ್ದಾರೆ. ರಾಂಚಿ ವಿಮಾನ ನಿಲ್ದಾಣದಲ್ಲಿ 4,000 ಅಡಿ ಎತ್ತರದಲ್ಲಿ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ರಣಹದ್ದು ಡಿಕ್ಕಿ ಹೊಡೆದ ನಂತರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ವಿಮಾನವು 175 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
“ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದ ನಿರ್ದೇಶಕ ಆರ್ ಆರ್ ಮೌರ್ಯ ಅವರು ಸುದ್ದಿ ಸಂಸ್ಥೆ ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ರಾಂಚಿ ಬಳಿ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಈ ಘಟನೆ ಸಂಭವಿಸಿದಾಗ ಅದು ಇಲ್ಲಿಂದ 3,000 ರಿಂದ 4,000 ಅಡಿ ಎತ್ತರದಲ್ಲಿತ್ತು. ಇಂಡಿಗೋ ವಿಮಾನವು ಪಾಟ್ನಾದಿಂದ ರಾಂಚಿಗೆ ಬರುತ್ತಿತ್ತು. ಪೈಲಟ್ ಇಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು” ಎಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ; ಆ. 31ರೊಳಗೆ ಟರ್ಕಿಶ್ ಏರ್‌ಲೈನ್ಸ್ ಜೊತೆಗಿನ ಗುತ್ತಿಗೆ ಕೊನೆಗೊಳಿಸಲು ಇಂಡಿಗೋಗೆ ಸರ್ಕಾರ ಆದೇಶ
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ, ರಣಹದ್ದು ಡಿಕ್ಕಿ ಹೊಡೆದ ನಂತರ ವಿಮಾನದ ಮುಂಭಾಗಕ್ಕೆ ಹಾನಿಯಾಯಿತು. ವಿಮಾನದಿಂದ ಉಂಟಾದ ಹಾನಿಯನ್ನು ಎಂಜಿನಿಯರ್‌ಗಳು ಪರೀಕ್ಷಿಸುತ್ತಿದ್ದಾರೆ. ರಾಂಚಿಗೆ ಬರುತ್ತಿದ್ದ ವಿಮಾನವು ಕೋಲ್ಕತ್ತಾಗೆ ಹೋಗಲು ನಿರ್ಧರಿಸಲಾಗಿತ್ತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಇಂಡಿಗೋ ಯಾವುದೇ ಹೇಳಿಕೆ ನೀಡಿಲ್ಲ.
STORY | IndiGo flight suffers bird hit, makes emergency landing at Ranchi airport, passengers safe: Official
READ: https://t.co/UhC7cOGFoP pic.twitter.com/L7CIeanFPR
— Press Trust of India (@PTI_News) June 2, 2025
ನೈಸರ್ಗಿಕ ಕಾರಣಗಳಿಂದ ಇಂಡಿಗೋ ವಿಮಾನ ಹಾನಿಗೊಳಗಾಗಿರುವುದು 15 ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ. ಮೇ 21ರಂದು ದೆಹಲಿ-ಶ್ರೀನಗರ ಇಂಡಿಗೋ ವಿಮಾನದ ಮೇಲೆ ಆಲಿಕಲ್ಲು ಮಳೆ ಸುರಿಯಿತು. ಆದರೂ ಆ ವಿಮಾನ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Mon, 2 June 25








