ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ಮೂಲಭೂತ ಹಕ್ಕು ಅಲ್ಲ: ಅಲಹಾಬಾದ್ ಹೈಕೋರ್ಟ್ ತೀರ್ಪು
ಇರ್ಫಾನ್ ಎಂಬುವರು ತನ್ನ ಹಳ್ಳಿಯಲ್ಲಿರುವ ಮಸೀದಿಗಳಲ್ಲಿ ಆಜಾನ್ ವೇಳೆ ಧ್ವನಿವರ್ಧಕ ಬಳಕೆ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನುಅಳವಡಿಸುವುದು ಮೂಲಭೂತ ಹಕ್ಕು ಅಲ್ಲ. ಹಾಗೇ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡುವುದು ಸಾಂವಿಧಾನಿಕ ಹಕ್ಕು ಅಲ್ಲ ಎಂಬುದನ್ನು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಈಗ ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವ ಸಂಬಂಧ ವಿವಾದ ಶುರುವಾಗಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಂತೂ ಮಸೀದಿ, ದೇಗುಲಗಳಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಧ್ವನಿವರ್ಧಕಗಳನ್ನೆಲ್ಲೆ ಸಿಎಂ ಯೋಗಿ ಆದಿತ್ಯನಾಥ್ ಅವರೇ ತೆಗೆಸಿಹಾಕಿದ್ದಾರೆ.
ಈ ಮಧ್ಯೆ ಇರ್ಫಾನ್ ಎಂಬುವರು ತನ್ನ ಹಳ್ಳಿಯಲ್ಲಿರುವ ಮಸೀದಿಗಳಲ್ಲಿ ಆಜಾನ್ ವೇಳೆ ಧ್ವನಿವರ್ಧಕ ಬಳಕೆ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾ. ವಿಕಾಸ್ ಬುದ್ವಾರ್, ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಮೂಲಭೂತವಾದ ಹಕ್ಕಲ್ಲ ಎಂಬ ಕಾನೂನನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಯಾಕಾಗಿ ಅನುಮತಿ ಕೊಡಬೇಕು ಎಂಬುದನ್ನು ಸಮರ್ಥಿಸಿಕೊಳ್ಳಲು ಈ ಅರ್ಜಿ ವಿಫಲವಾಗಿದೆ. ಹಾಗಾಗಿ ವಜಾಗೊಳಿಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.
ಇರ್ಫಾನ್ ಮೂಲತಃ ಉತ್ತರ ಪ್ರದೇಶದ ಧೋರನ್ಪುರ ಎಂಬ ಹಳ್ಳಿಯವರು. ಇಲ್ಲಿರುವ ನೂರಿ ಮಸೀದಿಯಲ್ಲಿ ಧ್ವನಿವರ್ಧಕ ಅಳವಡಿಸಲು ಅನುಮತಿ ಕೊಡಬೇಕು ಎಂದು 2021ರಲ್ಲಿ ಮೊದಲು ಬದೌನ್ ಜಿಲ್ಲೆಯ ಬಿಸೌಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM)ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗ ಅಲ್ಲಿ ಕೂಡ ನಿರಾಕರಿಸಲಾಗಿತ್ತು. ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅದನ್ನು ಪ್ರಶ್ನಿಸಿ ಇರ್ಫಾನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಇದು ರಾಜಕೀಯ ಕೊಲೆ ಎಂದ ದಿಲೀಪ್ ಘೋಷ್