LPG Booking: ಚಿಂತಿತರಾಗಬೇಡಿ, ಬೇಕಾದಷ್ಟು ಎಲ್​ಪಿಜಿ ಸಂಗ್ರಹವಿದೆ; ಸರ್ಕಾರದಿಂದ ಗ್ರಾಹಕರಿಗೆ ಮನವಿ

ದೇಶಾದ್ಯಂತ LPG ಗ್ಯಾಸ್ ಸಿಲಿಂಡರ್​ ಕೊರತೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ. ಹೀಗಾಗಿ, ಜನರು ಮುಗಿಬಿದ್ದು ಮುಂಗಡವಾಗಿ ಸಿಲಿಂಡರ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭಾರತದ ತೈಲ ಸಚಿವಾಲಯ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಯಾವುದೇ ರೀತಿಯ ಎಲ್​ಪಿಜಿ ಕೊರತೆ ಉದ್ಭವವಾಗಿಲ್ಲ, ಜನರು ಪ್ಯಾನಿಕ್ ಆಗಿ ಸಿಲಿಂಡರ್ ಬುಕ್ ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವೆ ಯುದ್ಧ ಆರಂಭವಾಗುವುದಕ್ಕೂ ಮೊದಲು ಭಾರತದಲ್ಲಿ ಸರಾಸರಿ 55.7 ಲಕ್ಷ ಇದ್ದ ಎಲ್​ಪಿಜಿ ಸಿಲಿಂಡರ್ ಬುಕಿಂಗ್ ಈ 15 ದಿನಗಳಲ್ಲಿ 75.7 ಲಕ್ಷಕ್ಕೆ ಏರಿಕೆಯಾಗಿದೆ. ಇದು ಜನರು ಎಷ್ಟು ಚಿಂತಿತರಾಗಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.

LPG Booking: ಚಿಂತಿತರಾಗಬೇಡಿ, ಬೇಕಾದಷ್ಟು ಎಲ್​ಪಿಜಿ ಸಂಗ್ರಹವಿದೆ; ಸರ್ಕಾರದಿಂದ ಗ್ರಾಹಕರಿಗೆ ಮನವಿ
Lpg Cylinder

Updated on: Mar 13, 2026 | 6:59 PM

ನವದೆಹಲಿ, ಮಾರ್ಚ್ 13: ಭಾರತದ ಅನೇಕ ನಗರಗಳಲ್ಲಿ ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ (LPG Cylinder Shortage) ಅಭಾವ ಎದುರಾಗುತ್ತಿದ್ದಂತೆ ದಿನಬಳಕೆಯ ಎಲ್​ಪಿಜಿ ಸಿಲಿಂಡರ್​ಗಳನ್ನು ಬುಕ್ ಮಾಡುವ ಗ್ರಾಹಕರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಗಕರಿಗೆ ಸ್ಪಷ್ಟನೆ ನೀಡಿದ್ದು, ಬೇಕಾದಷ್ಟು ಸಿಲಿಂಡರ್ ಸ್ಟಾಕ್ ಇರುವುದರಿಂದ ಯಾರೂ ಗೊಂದಲಕ್ಕೊಳಗಾಗಬೇಡಿ, ಚಿಂತಿತರಾಗಬೇಡಿ, ಆತುರದಿಂದ ಸಿಲಿಂಡರ್ ಬುಕ್ ಮಾಡಬೇಡಿ ಎಂದು ಸೂಚಿಸಿದೆ.

ಸಿಎನ್‌ಜಿ ಅಭಾವದ ಕುರಿತು ಅಂಕಿ-ಅಂಶ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ ಭಾರಿ ಹೆಚ್ಚಳವಾಗಿದೆ. ಮಾರ್ಚ್ 12ರಂದು ದಾಖಲೆಯ 75.7 ಲಕ್ಷ ಸಿಲಿಂಡರ್ ಬುಕಿಂಗ್ ಆಗಿದೆ. ಗೃಹಬಳಕೆಯ PNG ಮತ್ತು ಸಾರಿಗೆಯ CNGಗೆ ಶೇ.100ರಷ್ಟು ಪೂರೈಕೆಯಾಗುತ್ತಿದೆ. ದೇಶದಲ್ಲಿ ಒಟ್ಟು 25,605 LPG ವಿತರಣಾ ಕೇಂದ್ರಗಳ ಮೂಲಕ ನಿತ್ಯ 50 ಲಕ್ಷ ಸಿಲಿಂಡರ್‌ ವಿತರಣೆಯಾಗುತ್ತಿದೆ. ದೇಶದಲ್ಲಿ ಒಟ್ಟು 33.37 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಈ ಪೈಕಿ 10.56 ಕೋಟಿ ಉಜ್ವಲ ಯೋಜನೆಯಡಿ ಫಲಾನುಭವಿಗಳು. ಗೃಹಬಳಕೆ ಮತ್ತು ಸಾರಿಗೆ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ. PNG, CNG ಗ್ರಾಹಕರಿಗೆ ಯಾವುದೇ ಕಡಿತವಿಲ್ಲದೆ ಶೇ.100ರಷ್ಟು ಸಿಲಿಂಡರ್ ಪೂರೈಕೆಯಾಗುತ್ತಿದೆ. ಚಹಾ ಉದ್ಯಮ ಮತ್ತು ಇತರ ಉತ್ಪಾದನಾ ಘಟಕಗಳಿಗೆ ಶೇ.80ರಷ್ಟು ಪೂರೈಕೆ ಮಾಡಲಾಗುತ್ತಿದೆ. ರಸಗೊಬ್ಬರದ ಕಾರ್ಖಾನೆಗಳಿಗೆ ಶೇ. 70ರಷ್ಟು ಪೂರೈಕೆಯಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ಫೆಬ್ರವರಿ ತಿಂಗಳಲ್ಲಿ ಪ್ರತಿದಿನದ ಸರಾಸರಿ ಬುಕಿಂಗ್ 55.7 ಲಕ್ಷದಷ್ಟಿತ್ತು. ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಬುಕಿಂಗ್ ಹೆಚ್ಚಾಗಿದೆ. ಮಾರ್ಚ್ 12ರಂದು ಪ್ಯಾನಿಕ್‌ನಿಂದ ಸಿಲಿಂಡರ್ ಬುಕಿಂಗ್ 75.7 ಲಕ್ಷಕ್ಕೆ ಹೆಚ್ಚಳವಾಗಿದೆ. ಡಿಜಿಟಲ್ ಬುಕಿಂಗ್ ಪ್ರಮಾಣವು ಫೆಬ್ರವರಿಯಲ್ಲಿ ಶೇ.71ರಷ್ಟಿತ್ತು. ಮಾರ್ಚ್‌ನಲ್ಲಿ ಡಿಜಿಟಲ್ ಬುಕಿಂಗ್‌ ಶೇ.83ರಷ್ಟಾಗಿದೆ. ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ. ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಎಲ್​ಪಿಜಿಗೆ ಪ್ಯಾನಿಕ್ ಬುಕಿಂಗ್ ಬೇಡ; ಕೆಲ ವಲಯಗಳಿಗೆ ಆದ್ಯತೆ ಮೇರೆಗೆ ಕಮರ್ಷಿಯಲ್ ಗ್ಯಾಸ್ ನೀಡುತ್ತೇವೆ: ಸರ್ಕಾರದ ಹೇಳಿಕೆ

ಕಚ್ಚಾ ತೈಲದ ವಿಷಯದಲ್ಲಿ ನಮ್ಮ ದೇಶದಲ್ಲಿ 258 ಮಿಲಿಯನ್ ಮೆಟ್ರಿಕ್ ಟನ್ ಸಂಸ್ಕರಣಾ ಸಾಮರ್ಥ್ಯವಿದೆ. ನಾವು ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದ್ದರಿಂದ ದೇಶಕ್ಕೆ ಅದನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಎಲ್ಲಾ ಸಂಸ್ಕರಣಾಗಾರಗಳು ಶೇ. 100ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಸ್ಕರಣಾಗಾರಗಳು ಕಚ್ಚಾ ತೈಲದ ಸಾಕಷ್ಟು ದಾಸ್ತಾನುಗಳನ್ನು ಹೊಂದಿವೆ ಮತ್ತು ಸರಬರಾಜುಗಳನ್ನು ಸಹ ನಿರ್ವಹಿಸಲಾಗುತ್ತಿದೆ. ಕಳೆದೆರಡು ವಾರಗಳಲ್ಲಿ ಎಲ್​ಪಿಜಿ ಬುಕಿಂಗ್ ವಿನಂತಿಗಳು ಸುಮಾರು 10 ಪಟ್ಟು ಹೆಚ್ಚಾಗಿದೆ. ಬೇಡಿಕೆಯಲ್ಲಿ ಅಂತಹ ಹಠಾತ್ ಏರಿಕೆಯನ್ನು ನಿಭಾಯಿಸಲು ಸ್ವಲ್ಪ ಸಮಯ ಬೇಕಾಗಿದೆಯೇ ವಿನಃ ಸಂಗ್ರಹವಿಲ್ಲ ಎಂದು ಅರ್ಥವಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.


ಹಾಗೇ, ದೇಶದ ಹಲವಾರು ಭಾಗಗಳಲ್ಲಿ ಸಿಲಿಂಡರ್ ಕೊರತೆಯ ನಡುವೆ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕಗಳನ್ನು ಹೊಂದಲು ಸರ್ಕಾರ ಜನರ ಬಳಿ ಮನವಿ ಮಾಡಿದೆ.

ಕಾಳಸಂತೆಯಲ್ಲಿ (ಬ್ಲಾಕ್ ಮಾರ್ಕೆಟ್) ಎಲ್​ಪಿಜಿ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳಿಂದ ಮಾಹಿತಿ ನೀಡಿದೆ. ಕರ್ನಾಟಕದ ಯಾದಗಿರಿಯಲ್ಲಿ ಹೋಟೆಲ್‌ಗಳು ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ 46 ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ 38 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ 32 ಸಿಲಿಂಡರ್‌ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.

ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ಸುದ್ದಿಗೋಷ್ಠಿ ನಡೆದಿದ್ದು, ಕಾಳಸಂತೆಯಲ್ಲಿ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ. ಎಲ್‌ಪಿಜಿ ನಿಯಂತ್ರಣ ಆದೇಶ 2000 ರ ಅಡಿಯಲ್ಲಿ ಅಧಿಕಾರಿಗಳಿಂದ ತಪಾಸಣೆ, ಜಪ್ತಿ ಮಾಡಲಾಗುತ್ತಿದೆ. LPG ಪ್ಯಾನಿಕ್ ಬುಕಿಂಗ್ ಅಗತ್ಯವಿಲ್ಲ ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:00 pm, Fri, 13 March 26

Follow Us