ಲಕ್ನೋ ಕೋಚಿಂಗ್ ಕೇಂದ್ರದಲ್ಲಿ ಅಗ್ನಿ ದುರಂತ, 15 ವಿದ್ಯಾರ್ಥಿಗಳ ಸಜೀವದಹನ, ಮನೆಗೆಂದು ಪರ್ಮಿಷನ್ ಪಡೆದು ಕಮರ್ಷಿಯಲ್ ದಂಧೆ

ಲಕ್ನೋ ಅಲಿಗಂಜ್‌ನ ಕೋಚಿಂಗ್ ಕೇಂದ್ರದಲ್ಲಿನ ಅಗ್ನಿ ದುರಂತದಲ್ಲಿ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವಸತಿ ಕಟ್ಟಡವನ್ನು ಅಕ್ರಮವಾಗಿ ವಾಣಿಜ್ಯ ಬಳಕೆಗೆ ಪರಿವರ್ತಿಸಿದ್ದು, ತುರ್ತು ನಿರ್ಗಮನ ದ್ವಾರದ ಕೊರತೆ ಮತ್ತು ಜಾಮ್ ಆದ ಬಾಗಿಲುಗಳು ದುರಂತಕ್ಕೆ ಕಾರಣ. ಕಟ್ಟಡ ಮಾಲೀಕರ ನಿಯಮ ಉಲ್ಲಂಘನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಈ ಭೀಕರ ಘಟನೆಗೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ, ಹಲವರನ್ನು ಬಂಧಿಸಲಾಗಿದೆ.

ಲಕ್ನೋ ಕೋಚಿಂಗ್ ಕೇಂದ್ರದಲ್ಲಿ ಅಗ್ನಿ ದುರಂತ, 15 ವಿದ್ಯಾರ್ಥಿಗಳ ಸಜೀವದಹನ, ಮನೆಗೆಂದು ಪರ್ಮಿಷನ್ ಪಡೆದು ಕಮರ್ಷಿಯಲ್ ದಂಧೆ
ಅಗ್ನಿಶಾಮಕ ಸಿಬ್ಬಂದಿ

Updated on: Jun 23, 2026 | 7:24 AM

ಲಕ್ನೋ, ಜೂನ್ 23: ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಕೋಚಿಂಗ್ ಕೇಂದ್ರ(Coaching Centre)ವೊಂದರಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, 15 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಆವರಣದಲ್ಲಿದ್ದ ಅನಿಮೇಷನ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ದುರಂತದ ಬೆನ್ನಲ್ಲೇ ತನಿಖೆ ನಡೆಸಿರುವ ಅಧಿಕಾರಿಗಳಿಗೆ ಕಟ್ಟಡದ ಮಾಲೀಕರು ಮಾಡಿದ್ದ ಭಾರಿ ನಿಯಮ ಉಲ್ಲಂಘನೆ ಮತ್ತು ವಂಚನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ನಾಲ್ಕು ಜನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ದಾಖಲೆಗಳ ಪ್ರಕಾರ, ಉಷಾ ಮೆಹ್ತಾ ಮಾರ್ಗದಲ್ಲಿರುವ ಈ ಮೂರು ಅಂತಸ್ತಿನ ಕಟ್ಟಡವನ್ನು ಕೇವಲ ‘ವಸತಿ ಮನೆ’ಕಟ್ಟಲು ಅನುಮೋದನೆ ನೀಡಲಾಗಿತ್ತು. ಆದರೆ ಮಾಲೀಕರಾದ ವೀರೇಂದ್ರ ಪ್ರಸಾದ್ ಶುಕ್ಲಾ, ಸುರೇಂದ್ರ ಶುಕ್ಲಾ ಮತ್ತು ಧೀರೇಂದ್ರ ಶುಕ್ಲಾ ಎಂಬ ಸಹೋದರರು ವಸತಿ ನಕ್ಷೆಯನ್ನು ಬಳಸಿಕೊಂಡು ಇಡೀ ಕಟ್ಟಡವನ್ನು ವಾಣಿಜ್ಯ ಸಂಕೀರ್ಣವನ್ನಾಗಿ ಬದಲಾಯಿಸಿದ್ದರು. ಇಲ್ಲಿ ಅಂಗಡಿಗಳು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಅನಿಮೇಷನ್ ಕೇಂದ್ರವನ್ನು ಕಾನೂನುಬಾಹಿರವಾಗಿ ನಡೆಸಲಾಗುತ್ತಿತ್ತು.

ಮತ್ತಷ್ಟು ಓದಿ: ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ

ಇಷ್ಟು ದೊಡ್ಡ ಕಟ್ಟಡದಲ್ಲಿ ಬೆಂಕಿ ಬಿದ್ದಾಗ ಹೊರಗೆ ಓಡಲು ಯಾವುದೇ ತುರ್ತು ನಿರ್ಗಮನ ದ್ವಾರ ಇರಲಿಲ್ಲ. ಇನ್ನು ಟೆರೇಸ್ (ಮೇಲ್ಛಾವಣಿ) ಗೆ ಹೋಗುವ ದಾರಿಯನ್ನೂ ಲಾಕ್ ಮಾಡಲಾಗಿತ್ತು. ಅನಿಮೇಷನ್ ಕಚೇರಿಗೆ ಪ್ರವೇಶಿಸಲು ಹೆಬ್ಬೆರಳು ಮುದ್ರೆ ವ್ಯವಸ್ಥೆ ಇಡಲಾಗಿತ್ತು. ಬೆಂಕಿ ಬಿದ್ದ ತಕ್ಷಣ ವಿದ್ಯುತ್ ಕೈಕೊಟ್ಟಿದ್ದರಿಂದ ಎಲೆಕ್ಟ್ರಾನಿಕ್ ಲಾಕ್ ವ್ಯವಸ್ಥೆ ಜಾಮ್ ಆಗಿ ಬಾಗಿಲು ಲಾಕ್ ಆಗಿತ್ತು, ಇದರಿಂದಾಗಿ ಒಳಗೆ ಇದ್ದವರು ಹೊರಬರಲಾರದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

2014 ರಲ್ಲಿ ಈ ಆಸ್ತಿ ವರ್ಗಾವಣೆಯಾಗಿತ್ತು. 2016 ರಲ್ಲೇ ಈ ಕಟ್ಟಡದಲ್ಲಿ ಅನಧಿಕೃತ ನಿರ್ಮಾಣ ನಡೆಯುತ್ತಿರುವುದನ್ನು ಪತ್ತೆಹಚ್ಚಿ, ಅದನ್ನು ಕೆಡವಲು ಆದೇಶ ಹೊರಡಿಸಲಾಗಿತ್ತು. ಆದರೆ, ಮಾಲೀಕರು ನಮಗೆ ವಿಚಾರಣೆಗೆ ಅವಕಾಶ ನೀಡಿಲ್ಲ ಎಂದು ವಾದಿಸಿದ್ದರಿಂದ ಅದೇ ವರ್ಷ ಜುಲೈನಲ್ಲಿ ಆ ಆದೇಶವನ್ನು ರದ್ದುಗೊಳಿಸಲಾಗಿತ್ತು.

ಅಲ್ಲಿಂದ ಇಲ್ಲಿಯವರೆಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದೇ ಈ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಪ್ರಸ್ತುತ ಅಲಿಗಂಜ್ ಪೊಲೀಸ್ ಠಾಣೆಯಲ್ಲಿ ಕಟ್ಟಡದ ಮಾಲೀಕರ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us