
ಚಿಂದ್ವಾರ, ಅಕ್ಟೋಬರ್ 5: ಹಲವಾರು ಮಕ್ಕಳ ಸಾವಿಗೆ ಸಂಬಂಧಿಸಿದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Coldrif Cough Syrup) ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ಮಧ್ಯಪ್ರದೇಶದ ಚಿಂದ್ವಾರದಲ್ಲಿ ವಿಶೇಷ ತನಿಖಾ ತಂಡವು ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಅವರನ್ನು ಬಂಧಿಸಿದೆ. ಮಕ್ಕಳಿಗೆ ವಿಷಕಾರಿ ಸಿರಪ್ ಅನ್ನು ಶಿಫಾರಸು ಮಾಡಿದ್ದಕ್ಕಾಗಿ ತನಿಖೆಯ ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಸೂಚನೆಯಂತೆ, ಚಿಂದ್ವಾರ ಜಿಲ್ಲೆಯ ಪರಾಸಿಯಾದ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅವರ ಬಳಿ ಬರುತ್ತಿದ್ದ ಶಿಶುಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ. ಮಕ್ಕಳಿಗೆ ವೈದ್ಯಕೀಯ ಸೇವೆಗಳನ್ನು ನೀಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಲು ಮತ್ತು ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ; 11 ಮಕ್ಕಳ ಸಾವಿನ ಬಳಿಕ ಕೇಂದ್ರ ಸರ್ಕಾರ ಎಚ್ಚರಿಕೆ
ಪರಾಸಿಯಾ ಪ್ರದೇಶದ ಬಿಎಂಒ ಡಾ. ಅಂಕಿತ್ ಸಲ್ಲಂ ಅವರು ಸಲ್ಲಿಸಿದ ಔಪಚಾರಿಕ ದೂರಿನ ನಂತರ ಆ ವೈದ್ಯರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1940ರ ಹಲವಾರು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ನಿಯಮಗಳ ಉಲ್ಲಂಘನೆಗಳಿಗೆ ಭಾರತೀಯ ಕಾನೂನಿನಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆ ವಿಧಿಸಲಾಗುತ್ತದೆ.
ಬಂಧಿತ ವೈದ್ಯರ ಜೊತೆಗೆ, ಕೋಲ್ಡ್ರಿಫ್ ಸಿರಪ್ ತಯಾರಿಸುವ ಔಷಧ ಕಂಪನಿಯ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಕಾಂಚೀಪುರಂನಲ್ಲಿರುವ ತಮಿಳುನಾಡು ಮೂಲದ ಕಂಪನಿಯಾದ ಮೆಸರ್ಸ್ ಸ್ರೇಸನ್ ಫಾರ್ಮಾಸ್ಯುಟಿಕಲ್ ಕಂಪನಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಚಿಂದ್ವಾರ ಜಿಲ್ಲೆಯ ಪರಾಸಿಯಾ ಪ್ರದೇಶದಲ್ಲಿ ಸಿರಪ್ ಸೇವನೆಯಿಂದ ಹಲವಾರು ಮಕ್ಕಳ ಸಾವು ಸಂಭವಿಸಿದೆ.
ಇದನ್ನೂ ಓದಿ: Coldrif Syrup Ban: ಮಕ್ಕಳ ಸರಣಿ ಸಾವು; ಕರ್ನಾಟಕದಲ್ಲೂ ಕೋಲ್ಡ್ರಿಫ್ ಸಿರಪ್ ನಿಷೇಧ!
ಮಕ್ಕಳ ಸಾವಿನ ನಂತರ ಮಧ್ಯಪ್ರದೇಶ ಸರ್ಕಾರವು ಮಕ್ಕಳ ಸಾವಿನ ಹಿಂದಿನ ಕಾರಣಗಳು ಮತ್ತು ಸಂದರ್ಭಗಳನ್ನು ತನಿಖೆ ಮಾಡಲು ವೈದ್ಯಕೀಯ ಮತ್ತು ವಿಧಿವಿಜ್ಞಾನ ತಜ್ಞರ ವಿಶೇಷ ಸಮಿತಿಯನ್ನು ರಚಿಸಿತು. ಅವರು ಸಂಗ್ರಹಿಸಿದ ಸಿರಪ್ ಮಾದರಿಗಳ ಅಂತಿಮ ಪ್ರಯೋಗಾಲಯ ವಿಶ್ಲೇಷಣೆಯನ್ನು ಅವಲಂಬಿಸಿ ಮುಂದಿನ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳು ನಡೆಯುತ್ತವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಚಿಂದ್ವಾರಾದ ಪರಾಸಿಯಾದಿಂದ ಕೋಲ್ಡ್ರಿಫ್ ಸಿರಪ್ ಹಗರಣ ಬೆಳಕಿಗೆ ಬಂದಿದ್ದು, ಅಲ್ಲಿ ಹಲವಾರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದರು. ಅವರಲ್ಲಿ ಕೆಲವರು ಕೆಮ್ಮಿನ ಸಿರಪ್ ಸೇವಿಸಿದ ನಂತರ ಪ್ರಾಣ ಕಳೆದುಕೊಂಡರು. ಪ್ರಾಥಮಿಕ ತನಿಖೆಗಳು ಆ ಸಿರಪ್ ಮಕ್ಕಳ ಬಳಕೆಗೆ ಅನರ್ಹವಾದ ಹೆಚ್ಚು ಕಲಬೆರಕೆ ರಾಸಾಯನಿಕ ಸಂಯುಕ್ತಗಳನ್ನು ಹೊಂದಿದೆ ಎಂದು ಸೂಚಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ