ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ; ದುರ್ಗಾ ವಿಸರ್ಜನೆ ಮುಗಿಸಿ ಮರಳುತ್ತಿದ್ದ ಟ್ರ್ಯಾಕ್ಟರ್ ನದಿಗೆ ಬಿದ್ದು 11 ಜನ ಸಾವು

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಭೀಕರ ದುರಂತ ಸಂಭವಿಸಿದೆ. ದುರ್ಗಾ ದೇವಿಯ ವಿಗ್ರಹವನ್ನು ಮುಳುಗಿಸಿ ಹಿಂತಿರುಗುತ್ತಿದ್ದ ಜನರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಆಯತಪ್ಪಿ ನದಿಗೆ ಬಿದ್ದಿದೆ. ಈ ಘಟನೆಯಲ್ಲಿ ನೀರಿನಲ್ಲಿ ಮುಳುಗಿ 11ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ; ದುರ್ಗಾ ವಿಸರ್ಜನೆ ಮುಗಿಸಿ ಮರಳುತ್ತಿದ್ದ ಟ್ರ್ಯಾಕ್ಟರ್ ನದಿಗೆ ಬಿದ್ದು 11 ಜನ ಸಾವು
Khandwa Accident

Updated on: Oct 02, 2025 | 8:07 PM

ಭೂಪಾಲ್, ಅಕ್ಟೋಬರ್ 2: ದಸರಾ (Dasara) ದಿನವಾದ ಇಂದು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಒಂದು ಭೀಕರ ಅಪಘಾತ (Accident) ಸಂಭವಿಸಿದೆ. ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ಮುಗಿಸಿ ಹಿಂತಿರುಗುತ್ತಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನದಿಗೆ ಉರುಳಿದೆ. ಈ ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಪಂಧಾನಾ ಪೊಲೀಸ್ ಠಾಣೆ ಪ್ರದೇಶದ ಜಮಾಲಿ ಬಳಿಯ ಅಬ್ನಾ ನದಿಯಲ್ಲಿ ಈ ಘಟನೆ ಸಂಭವಿಸಿದೆ.

ನದಿಯಲ್ಲಿ ಕಾಣೆಯಾದವರ ಸಂಬಂಧಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಈ ದುರಂತ ಘಟನೆ ಪಂಧಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅರ್ದಲ ಕಲಾನ್ ಗ್ರಾಮದಲ್ಲಿ ಸಂಭವಿಸಿದೆ. ನವರಾತ್ರಿ ಮುಗಿದ ನಂತರ, ಗ್ರಾಮಸ್ಥರು ಅಬ್ನಾ ನದಿಯಲ್ಲಿ ವಿಗ್ರಹಗಳನ್ನು ವಿಸರ್ಜಿಸಲು ಹೋಗಿದ್ದರು. ವಿಸರ್ಜನೆಯಿಂದ ಹಿಂತಿರುಗುವಾಗ ಅವರ ಟ್ರ್ಯಾಕ್ಟರ್ ಟ್ರಾಲಿ ಸೇತುವೆಯನ್ನು ಹತ್ತುವಾಗ ಆಯತಪ್ಪಿ ಅಬ್ನಾ ನದಿಗೆ ಬಿದ್ದಿತು. ಟ್ರ್ಯಾಕ್ಟರ್ ಟ್ರಾಲಿಯಲ್ಲಿ 20ರಿಂದ 22 ಜನರು ಇದ್ದರು. ನದಿಗೆ ಬಿದ್ದ ನಂತರ ಎಲ್ಲರೂ ಕಿರುಚಲು ಪ್ರಾರಂಭಿಸಿದರು. ದುರ್ಗಾದೇವಿಯ ವಿಗ್ರಹದ ವಿಸರ್ಜನೆಗಾಗಿ ನದಿ ದಂಡೆಯಲ್ಲಿ ಭಾರಿ ಜನಸಂದಣಿ ಇದ್ದ ಕಾರಣ, ತಕ್ಷಣ ಜನರು ಸಹಾಯಕ್ಕೆ ಧಾವಿಸಿದರು.

ಇದನ್ನೂ ಓದಿ: ಕಲಬುರಗಿ: ಭೀಮಾ ನದಿ ಅಬ್ಬರಕ್ಕೆ ಊರಿಗೂರೆ ಮುಳುಗಡೆ; ಮನೆ ಬಿಟ್ಟು ಹೊರಟ ಗ್ರಾಮಸ್ಥರು

ಕೂಡಲೆ ಕೆಲವು ಜನರನ್ನು ರಕ್ಷಿಸಲಾಯಿತು. ಆದರೆ ಇನ್ನೂ ಹಲವರು ಕಾಣೆಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತ ತಂಡಗಳು ಸ್ಥಳಕ್ಕೆ ಆಗಮಿಸಿದವು. ಅವರು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಕಾಣೆಯಾದವರನ್ನು ಹುಡುಕಲು ಪ್ರಾರಂಭಿಸಿದರು. ಇಲ್ಲಿಯವರೆಗೆ, 11 ಜನರ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಎಂಬುದು ಇನ್ನಷ್ಟು ಬೇಸರದ ಸಂಗತಿ.


ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಇನ್ನೂ ಅದೇ ಸ್ಥಳದಲ್ಲಿದ್ದಾರೆ. ನದಿಯಿಂದ ರಕ್ಷಿಸಲ್ಪಟ್ಟವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿಗ್ರಹ ವಿಸರ್ಜನೆಯ ನಂತರ ಸೇತುವೆಯನ್ನು ದಾಟುತ್ತಿದ್ದಾಗ ಟ್ರ್ಯಾಕ್ಟರ್ ಟ್ರಾಲಿ ಇದ್ದಕ್ಕಿದ್ದಂತೆ ಪಲ್ಟಿಯಾಗಿ ನದಿಗೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Thu, 2 October 25