ವಿದೇಶಕ್ಕೆ ಹೋಗಿ ಭಾರತಕ್ಕೆ ಅವಮಾನ; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿ
ಕೊಲಂಬಿಯಾದ ವಿಶ್ವವಿದ್ಯಾಲಯದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿಯ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು ಇದು ಭಾರತಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ. ಹಲವು ಬಿಜೆಪಿ ನಾಯಕರು ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನವದೆಹಲಿ, ಅಕ್ಟೋಬರ್ 2: ಕೊಲಂಬಿಯಾದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಐಎ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿಯ ಹೇಳಿಕೆಗಳ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, “ರಾಹುಲ್ ಗಾಂಧಿ ಮತ್ತೆ ವಿದೇಶಿ ನೆಲದಲ್ಲಿ ಭಾರತವನ್ನು ಅವಮಾನಿಸಿದ್ದಾರೆ” ಎಂದಿದ್ದಾರೆ.
“ಲಂಡನ್‌ನಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಕೆಣಕುವುದರಿಂದ ಹಿಡಿದು, ಅಮೆರಿಕದಲ್ಲಿ ನಮ್ಮ ಸಂಸ್ಥೆಗಳನ್ನು ಅಣಕಿಸುವವರೆಗೆ, ಈಗ ಕೊಲಂಬಿಯಾದಲ್ಲಿ ಅವರು ಜಾಗತಿಕವಾಗಿ ಭಾರತವನ್ನು ಅವಮಾನಿಸುವ ಮೂಲಕ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾರೆ” ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.
“ಅಧಿಕಾರದಿಂದ ಹೊರಗಿರುವುದು ಒಂದು ವಿಷಯ. ಆದರೆ ದೇಶಭಕ್ತಿಯನ್ನು ಕಳೆದುಕೊಳ್ಳುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಯನ್ನು ವಿರೋಧಿಸಿ ಪರವಾಗಿಲ್ಲ, ಆದರೆ ಭಾರತ ಮಾತೆಯನ್ನು ಅವಮಾನಿಸಬೇಡಿ” ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?:
“ಭಾರತದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ದೊಡ್ಡ ಅಪಾಯ. ಏಕೆಂದರೆ ಭಾರತವು ಬಹು ಧರ್ಮಗಳು, ಬಹು ಸಂಪ್ರದಾಯಗಳು, ಬಹು ಭಾಷೆಗಳನ್ನು ಹೊಂದಿದೆ. ಭಾರತದಲ್ಲಿ ವಿಭಿನ್ನ ಸಂಪ್ರದಾಯಗಳು, ವಿಭಿನ್ನ ಧರ್ಮಗಳು ಮತ್ತು ವಿಭಿನ್ನ ವಿಚಾರಗಳಿಗೆ ಸ್ಥಳಾವಕಾಶ ಬೇಕಾಗುತ್ತದೆ. ಆ ಜಾಗವನ್ನು ಸೃಷ್ಟಿಸಲು ಉತ್ತಮ ವಿಧಾನವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ, ಪ್ರಸ್ತುತ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸಂಪೂರ್ಣ ದಾಳಿ ನಡೆಯುತ್ತಿದೆ. ಆದ್ದರಿಂದ ಅದು ಅಪಾಯದ ಸಂಗತಿಯಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




