ಕೇಂದ್ರಮಂತ್ರಿಯಾಗುತ್ತಿದ್ದಂತೆ ಮಧ್ಯಪ್ರದೇಶಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ..!
Jyotiraditya Scindia: ದೂರದ ಮತ್ತು ಪ್ರಾದೇಶಿಕ ಸ್ಥಳಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಮತ್ತು ಪ್ರಯಾಣಿಕರಿಗೆ ವಿಮಾನ ಯಾನ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಉಡಾನ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇದೀಗ ತಮ್ಮ ರಾಜ್ಯ ಮಧ್ಯಪ್ರದೇಶಕ್ಕೆ ಭರ್ಜರಿ ಉಡುಗೋರೆಯನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸಂಪುಟ ಸೇರಿರುವ ಸಿಂಧಿಯಾ ನಾಗರಿಕ ವಿಮಾನಯಾನ ಇಲಾಖೆಯ ಜವಾಬ್ದಾರಿ ಹೊತ್ತಿದ್ದಾರೆ. ನಾಗರಿಕ ವಿಮಾನಯಾನ ಕೇಂದ್ರ ಸಚಿವರಾಗುತ್ತಿದ್ದಂತೆ ಮಧ್ಯಪ್ರದೇಶದತ್ತ ಗಮನಹರಿಸಿರುವ ಅವರು, ರಾಜ್ಯಕ್ಕೆ ಎಂಟು ವಿಮಾನಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶಕ್ಕೆ ಒಂದು ಗುಡ್ ನ್ಯೂಸ್ ಇದೆ. ಜುಲೈ 16ರಿಂದ ಇಲ್ಲಿ 8 ಹೊಸ ವಿಮಾನಗಳು ಸಂಚರಿಸಲಿವೆ. ಉಡಾನ್ (UDAN) ಯೋಜನೆಯಡಿ ಈ ವಿಮಾನಗಳ ಹಾರಾಟ ಶುರುವಾಗಲಿದೆ ಎಂದು ಹೇಳಿದ್ದಾರೆ. ಉಡಾನ್ ಎಂಬುದು ಪ್ರಾದೇಶಿಕ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ. ಪ್ರಯಾಣಿಕರಿಗೆ ಅಗ್ಗದಲ್ಲಿ ವಿಮಾನ ಯಾನ ನಡೆಸಲು ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಸರ್ಕಾರ ಇದನ್ನು ಜಾರಿಗೊಳಿಸಿದೆ. ಅದರಡಿಯಲ್ಲಿ ಮಧ್ಯಪ್ರದೇಶಕ್ಕೆ ಇದೀಗ ಎಂಟು ವಿಮಾನಗಳನ್ನು ನೀಡುವುದಾಗಿ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಸ್ಪೈಸ್ಜೆಟ್ ಕಂಪನಿಯ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದು, ಗ್ವಾಲಿಯರ್-ಮುಂಬೈ-ಗ್ವಾಲಿಯರ್, ಗ್ವಾಲಿಯರ್-ಪುಣೆ-ಗ್ವಾಲಿಯರ್, ಜಬಲ್ಪುರ-ಸೂರತ್-ಜಬಲ್ಪುರ ಮತ್ತು ಅಹ್ಮದಾಬಾದ್-ಗ್ವಾಲಿಯರ್-ಅಹ್ಮದಾಬಾದ್ ವಿಮಾನಗಳು ಜು.16ರಿಂದ ಸಂಚಾರ ಪ್ರಾರಂಭಿಸುವುದಾಗಿ ಮಾಹಿತಿ ನೀಡಿದ್ದಾರೆ. 2017ರಲ್ಲಿ ಹರ್ದೀಪ್ ಸಿಂಗ್ ಪುರಿ ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಉಡಾನ್ ಯೋಜನೆ ಪ್ರಾರಂಭವಾಗಿದೆ. ದೂರದ ಮತ್ತು ಪ್ರಾದೇಶಿಕ ಸ್ಥಳಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಮತ್ತು ಪ್ರಯಾಣಿಕರಿಗೆ ವಿಮಾನ ಯಾನ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಉಡಾನ್ ಯೋಜನೆಗೆ ಇನ್ನಷ್ಟು ಮಹತ್ವ ನೀಡಲು ಇದೀಗ ಕೇಂದ್ರ ಸರ್ಕಾರ ನಿರ್ಧರಿಸಿದೆ.
Good news for Madhya Pradesh! Starting 8 new flights from July 16 onwards via @flyspicejet – Gwalior-Mumbai-Gwalior – Gwalior-Pune-Gwalior – Jabalpur-Surat-Jabalpur – Ahmedabad-Gwalior-Ahmedabad@MoCA_GoI & the aviation industry are committed to take #UDAN to greater heights!
— Jyotiraditya M. Scindia (@JM_Scindia) July 11, 2021
ಇದನ್ನೂ ಓದಿ: Aam Admi Party: ದಿನವಿಡೀ ಕರೆಂಟ್, 300 ಯುನಿಟ್ ವಿದ್ಯುತ್ ಉಚಿತ; ಉತ್ತರಾಖಂಡದಲ್ಲಿ ಆಮ್ ಆದ್ಮಿಯನ್ನು ಗೆಲ್ಲಿಸಲು ಬಿಗ್ ಆಫರ್