ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಶವ ನಿನ್ನೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಅವರ ಶಿಷ್ಯ ನಿರ್ಭಯ್ ದ್ವಿವೇದಿ ಒಂದು ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನರೇಂದ್ರ ಗಿರಿಯವರು ಸಾವಿಗೂ ಮೊದಲು ಒಂದು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಇದೀಗ ಪೊಲೀಸರ ಬಳಿಯಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಮಹಾಂತ ನರೇಂದ್ರ ಗಿರಿಯವರ ಶವ ಅವರ ಪ್ರಯಾಗರಾಜ್ನಲ್ಲಿರುವ ನಿವಾಸದ ಕೋಣೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ. ಅದು ಆತ್ಮಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಸೂಸೈಡ್ ನೋಟ್ ಕೂಡ ಬರೆದಿಟ್ಟಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ವಿಡಿಯೋವನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಸೂಸೈಡ್ ನೋಟ್ನಲ್ಲಿ ಇರುವುದೇ ಬಹುತೇಕ ವಿಡಿಯೋದಲ್ಲೂ ಇರುವುದಾಗಿ ನಿರ್ಭಯ್ ದ್ವಿವೇದಿ ತಿಳಿಸಿದ್ದಾರೆ.
ಆತ್ಮಹತ್ಯೆ ನೋಟ್ ಮತ್ತು ವಿಡಿಯೋ ಎರಡರದಲ್ಲೂ ಮಹಾಂತ ನರೇಂದ್ರ ಗಿರಿಯವರು ಕೆಲವು ಜನರ ಹೆಸರನ್ನು ಉಲ್ಲೇಖಿಸಿ, ನನಗೆ ತುಂಬ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ತುಂಬ ಘನತೆಯಿಂದ ಜೀವನ ನಡೆಸುತ್ತಿದ್ದೇನೆ. ಅವಮಾನಗಳನ್ನು ಸಹಿಸುತ್ತ ಬದುಕಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಾನು ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದೇನೆ ಎಂದು ಸೂಸೈಡ್ ಲೆಟರ್ನಲ್ಲಿ ಬರೆದಿದ್ದಾರೆ. ಸುಮಾರು 7-8 ಪುಟಗಳ ಸೂಸೈಡ್ ನೋಟ್ ಬರೆದಿರುವ ಅವರು, ತಮ್ಮ ಮಾನಸಿಕ ನೋವಿಗೆ ಅನೇಕ ಕಾರಣಗಳು ಇವೆ ಎಂದು ಹೇಳಿದ್ದಾರೆ.
ಶಿಷ್ಯನ ಹೆಸರು ಉಲ್ಲೇಖ
ಇನ್ನು ಸೂಸೈಡ್ ನೋಟ್ನಲ್ಲಿ ತನ್ನ ಆಪ್ತ ಶಿಷ್ಯನಾದ ಆನಂದ್ ಗಿರಿ ಎಂಬುವರು ಹೆಸರನ್ನು ಮಹಾಂತ ಗಿರಿ ಸ್ವಾಮಿ ಉಲ್ಲೇಖ ಮಾಡಿದ್ದಾರೆ. ಹಾಗಾಗಿ ಆನಂದಗಿರಿಯವರನ್ನು ಕೂಡ ಪೊಲೀಸರು ಹರಿದ್ವಾರದಲ್ಲಿ ವಶಕ್ಕೆ ಪಡೆದಿದ್ದಾರೆ. ಮಹಾಂತ ನರೇಂದ್ರ ಗಿರಿ ಮೃತಪಟ್ಟ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಆನಂದ ಗಿರಿಯವರು, ಗುರೂಜಿಯವರು ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯೇನೂ ಅಲ್ಲ. ಹಣಕ್ಕಾಗಿ ಅವರನ್ನು ಹಿಂಸಿಸಲಾಗಿದೆ. ಹಾಗೇ, ನನ್ನ ವಿರುದ್ಧವೂ ಪಿತೂರಿ ನಡೆದಿದೆ. ಯಾವುದೇ ಆಧಾರದ ಇಲ್ಲದೆಯೇ ನನ್ನ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್ ಪಕ್ಷ ತೊರೆಯುವ ಮುನ್ಸೂಚನೆ ಹಿನ್ನೆಲೆ ಹೊಸ ಅಭ್ಯರ್ಥಿಯನ್ನು ಹುಟ್ಟುಹಾಕಿದ ಕುಮಾರಸ್ವಾಮಿ
Published On - 9:51 am, Tue, 21 September 21