ಪರಮ್ವೀರ್ ಸಿಂಗ್ ಪತ್ರ ಅಧಿಕೃತ ಮೈಲ್ ವಿಳಾಸದಿಂದ ಬಂದಿಲ್ಲ, ಅವರ ಸಹಿಯೂ ಇರಲಿಲ್ಲ: ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ
ಹೊಸ ಇಮೈಲ್ ವಿಳಾಸವನ್ನು ಪರಿಶೀಲಿಸಬೇಕಾಗಿದೆ. ಮಹಾರಾಷ್ಟ್ರ ಗೃಹ ಸಚಿವಾಲಯ ಈ ಬಗ್ಗೆ ಪರಮ್ವೀರ್ ಸಿಂಗ್ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಮುಂಬೈ: ಪರಮ್ವೀರ್ ಸಿಂಗ್ ಪತ್ರ ಇಂದು (ಮಾರ್ಚ್ 20) ಸಂಜೆ 4.37ಕ್ಕೆ ಬೇರೆ ಮೈಲ್ ವಿಳಾಸದಿಂದ ಬಂದಿದೆ. ಪರಮ್ವೀರ್ ಸಿಂಗ್ ಅಧಿಕೃತ ಮೈಲ್ ವಿಳಾಸದ ಬದಲಾಗಿ ಬೇರೆ ವಿಳಾಸದಿಂದ ಬಂದಿದೆ. ಹಾಗೂ ಪತ್ರದಲ್ಲಿ ಪರಮ್ವೀರ್ ಸಿಂಗ್ ಸಹಿ ಕೂಡ ಇರಲಿಲ್ಲ. ಹೊಸ ಇಮೈಲ್ ವಿಳಾಸವನ್ನು ಪರಿಶೀಲಿಸಬೇಕಾಗಿದೆ. ಮಹಾರಾಷ್ಟ್ರ ಗೃಹ ಸಚಿವಾಲಯ ಈ ಬಗ್ಗೆ ಪರಮ್ವೀರ್ ಸಿಂಗ್ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಅಮಾನತು ಆಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಪ್ರತೀ ತಿಂಗಳು 100 ಕೋಟಿ ದಂಡ ಸಂಗ್ರಹಿಸುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಿ ಮುಂಬೈ ಮಾಜಿ ಪೊಲೀಸ್ ಆಯುಕ್ತ ಹಾಗೂ ಹಾಲಿ ಕಮಾಂಡೆಂಟ್ ಜನರಲ್ ಆಫ್ ಹೋಮ್ ಗಾರ್ಡ್ಸ್ ಆಗಿರುವ ಪರಮ್ವೀರ್ ಸಿಂಗ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿದ್ದ ಪತ್ರ ಇಂದು (ಮಾರ್ಚ್ 20) ಸಂಜೆ ಸಂಚಲನ ಸೃಷ್ಟಿಸಿತ್ತು. ಇದೀಗ ಪತ್ರಕ್ಕೆ ಸಂಬಂಧಿಸಿದ ಪ್ರಕರಣ ಮತ್ತೊಂದು ಆಯಾಮ ಪಡೆದುಕೊಂಡಿದೆ. ಪರಮ್ವೀರ್ ಸಿಂಗ್ ಪತ್ರದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಹೊರಟಿದೆ.
ಪತ್ರದ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರೂ ಆಗಿರುವ ದೇವೇಂದ್ರ ಫಡ್ನವಿಸ್, ಗೃಹ ಸಚಿವರು ರಾಜೀನಾಮೆ ನೀಡಬೇಕು. ಒಂದುವೇಳೆ ಅನಿಲ್ ದೇಶ್ಮುಖ್ ರಾಜೀನಾಮೆ ನೀಡದಿದ್ದರೆ ಖುದ್ದು ಮುಖ್ಯಮಂತ್ರಿ ಅವರು ಗೃಹ ಸಚಿವರನ್ನು ತೆಗೆದುಹಾಕಬೇಕು. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದರು.
ಮತ್ತೊಂದೆಡೆ, ಪರಮ್ವೀರ್ ಸಿಂಗ್ ಮಾಡಿರುವ ಆರೋಪಗಳನ್ನು ಗೃಹ ಸಚಿವ ಅನಿಲ್ ದೇಶ್ಮುಖ್ ತಳ್ಳಿ ಹಾಕಿದ್ದಾರೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅವರು ಹೇಳಿದ್ದಾರೆ. ಪರಮ್ವೀರ್ ಸಿಂಗ್ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು. ಹಾಗೂ ನಾನು ಮಾನಹಾನಿ ಪ್ರಕರಣ ದಾಖಲಿಸುತ್ತಿರುವ ಕಾರಣ ಅವರು ಮಾಡಿರುವ ಆರೋಪಗಳನ್ನು ಸಾಕ್ಷೀಕರಿಸಬೇಕು ಎಂದು ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.
ಪರಮ್ವೀರ್ ಸಿಂಗ್ ಪತ್ರದ ಸಂಪೂರ್ಣ ವಿವರ ಇಲ್ಲಿದೆ: ಪರಮ್ವೀರ್ ಸಿಂಗ್ ಉದ್ಧವ್ ಠಾಕ್ರೆಗೆ ಬರೆದ ಪತ್ರ
ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವರ ರಾಜೀನಾಮೆಗೆ ದೇವೇಂದ್ರ ಫಡ್ನವಿಸ್ ಒತ್ತಾಯ; ತನ್ನ ಮೇಲಿನ ಆರೋಪ ಸುಳ್ಳು ಎಂದ ಅನಿಲ್ ದೇಶ್ಮುಖ್
Published On - 11:07 pm, Sat, 20 March 21