Maharashtra: ಒಂದೂವರೆ ತಾಸು ಮುಂಚಿತವಾಗಿ ಬಂದು 45 ಪ್ರಯಾಣಿಕರನ್ನು ಬಿಟ್ಟು ಹೊರಟೇ ಬಿಡ್ತು ಗೋವಾ ಎಕ್ಸ್‌ಪ್ರೆಸ್ ರೈಲು
ದೆಹಲಿಗೆ ಹೊರಟಿದ್ದ ಗೋವಾ ಎಕ್ಸ್‌ಪ್ರೆಸ್ ರೈಲು(Goa Express Train) ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್ ರೈಲು ನಿಲ್ದಾಣದಲ್ಲಿ 90 ನಿಮಿಷ ಮುಂಚಿತವಾಗಿ ಬಂದು, 45 ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಪುಣೆ, ಜುಲೈ 28: ದೆಹಲಿಗೆ ಹೊರಟಿದ್ದ ಗೋವಾ ಎಕ್ಸ್‌ಪ್ರೆಸ್ ರೈಲು(Goa Express Train) ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್ ರೈಲು ನಿಲ್ದಾಣದಲ್ಲಿ 90 ನಿಮಿಷ ಮುಂಚಿತವಾಗಿ ಬಂದು, 45 ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ. ರೈಲುಗಳು ನಿಗದಿತ ಸಮಯಕ್ಕಿಂತ ಬೇಗ ಬಂದಿರುವ ನಿದರ್ಶನಗಳೇ ಇಲ್ಲ, ಸಾಮಾನ್ಯವಾಗಿ ರೈಲು ಅರ್ಧ, ಒಂದು ತಾಸು ತಡವಾಗಿಯೇ ಬರುತ್ತದೆ. ಆದರೆ ಈ ರೈಲು ಬರೋಬ್ಬರಿ ಒಂದೂವರೆ ತಾಸು ಮೊದಲು ಬಂದು ಕೇವಲ ಐದು ನಿಮಿಷಗಳ ಕಾಲ ರೈಲು ನಿಲ್ದಾಣದಲ್ಲಿ ನಿಂತು ಹೊರಟೇ ಬಿಟ್ಟಿತ್ತು.
ರೈಲು ಬೇಗ ಬಂದಿದ್ದ ಕಾರಣ ಮಾರ್ಗವನ್ನು ಬದಲಾಯಿಸಬೇಕಾಯಿತು, ವಾಸ್ಕೋ ಡ ಗಾಮಾ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ತನ್ನ ನಿಗದಿತ ವೇಳೆ ಬೆಳಗ್ಗೆ 10.35 ಆದರೆ ಆಗಮನಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ 9.05 ಕ್ಕೆ ಆಗಮಿಸಿತು ಮತ್ತು 9.10 ಕ್ಕೆ ಅವಸರದಲ್ಲಿ ಹೊರಟಿತು. ಪ್ರಯಾಣಿಕರಿಗೆ ಇದು ತಿಳಿದಿರಲಿಲ್ಲ ಅವರು 9.45 ರ ವೇಳೆಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು, ರೈಲು ಬೇಗ ಹೋಗಿರುವ ವಿಷಯ ತಿಳಿಯುತ್ತಿದ್ದಂತೆ ಬೇರೆ ವ್ಯವಸ್ಥೆ ಮಾಡುವಂತೆ ಧರಣಿ ಮಾಡಿದರು.
ಮತ್ತಷ್ಟು ಓದಿ: ವಿದ್ಯುತ್ ತಂತಿ ತುಂಡಾಗಿರುವ ಹಿನ್ನೆಲೆ, ಚೆನ್ನೈ-ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತ
ರೈಲು ಸಾಮಾನ್ಯವಾಗಿ ಮೀರಜ್-ಪುಣೆ-ಡೌಂಡ್ನ ಮಾರ್ಗದ ಮೂಲಕ ಮನ್ಮಾಡ್ ತಲುಪುತ್ತದೆ, ಆದರೆ ಗುರುವಾರ, ಮನ್ಮಾಡ್ ತಲುಪಲು ರತ್ನಾಗಿರಿ-ನಾಸಿಕ್ ಮೂಲಕ ಬಂದಿದೆ. ಹೀಗಾಗಿ ರೈಲು ಬೇಗ ಬಂದಿತ್ತು ಎಂದು ಕೇಂದ್ರ ರೈಲ್ವೆ ವಲಯದ ಮುಖ್ಯ ಪಿಆರ್ಒ ಶಿವರಾಜ್ ಮನಸ್ಪುರೆ ಹೇಳಿದ್ದಾರೆ. ಗೋವಾ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರನ್ನು ನಂತರ ಮುಂಬೈ-ಹೌರಾ ಗೀತಾಂಜಲಿ ಎಕ್ಸ್‌ಪ್ರೆಸ್‌ಗೆ ಹತ್ತಿಸಲಾಯಿತು. ಎರಡೂ ರೈಲು ಮಧ್ಯಪ್ರದೇಶದ ಭೂಸಾಲ್ವರೆಗೆ ಒಂದೇ ಮಾರ್ಗವನ್ನು ಬಳಸುತ್ತವೆ. ಗೀತಾಂಜಲಿ ಎಕ್ಸ್‌ಪ್ರೆಸ್ ರೈಲಿಗೆ ಮನ್ಮಾಡ್ನಲ್ಲಿ ನಿಲುಗಡೆ ಇರಲಿಲ್ಲ ಆದರೂ 11.26ಕ್ಕೆ ಮನ್ಮಾಡ್ನಲ್ಲಿ ನಿಲುಗಡೆ ಮಾಡಲಾಯಿತು.
ಈ ಮಧ್ಯೆ, ಗೋವಾ ಎಕ್ಸ್‌ಪ್ರೆಸ್ ಅನ್ನು ಭೂಸಾವಲ್‌ಗೆ ಮೊದಲು ಜಲಗಾಂವ್ ಜಂಕ್ಷನ್‌ನಲ್ಲಿ ಕಾಯುವಂತೆ ಮಾಡಲಾಯಿತು. ಗೋವಾ ಎಕ್ಸ್‌ಪ್ರೆಸ್ ಜಲ್ಗಾಂವ್‌ಗೆ ಮಧ್ಯಾಹ್ನ 1.16 ಕ್ಕೆ ತಲುಪಿತು ಮತ್ತು ಗೀತಾಂಜಲಿ ಎಕ್ಸ್‌ಪ್ರೆಸ್ ಅಲ್ಲಿಗೆ ಬರುವವರೆಗೆ 30 ನಿಮಿಷಗಳ ಕಾಲ ಕಾಯಲಾಯಿತು. 45 ಪ್ರಯಾಣಿಕರನ್ನು ಅವರು ಟಿಕೆಟ್ ಕಾಯ್ದಿರಿಸಿದ ರೈಲಿಗೆ ಸ್ಥಳಾಂತರಿಸಲಾಯಿತು, ಗೋವಾ ಎಕ್ಸ್‌ಪ್ರೆಸ್ ಮಧ್ಯಾಹ್ನ 1.46 ಕ್ಕೆ ಹೊರಟಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Fri, 28 July 23