AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ-ಗೋವಾ ಗಡಿ ಕ್ಯಾಸಲ್ ರಾಕ್​ ಬಳಿ ಮತ್ತೆ ಭೂಕುಸಿತ: ರೈಲು ಸಂಚಾರ ರದ್ದು, ಮಳೆ ಮಧ್ಯೆಯೂ ನಡೆದ ಮಣ್ಣು ತೆರವು ಕಾರ್ಯಚರಣೆ

ಕರ್ನಾಟಕ-ಗೋವಾ ಗಡಿ ಕ್ಯಾಸಲ್ ರಾಕ್ ಪ್ರದೇಶದ ಬಳಿ ಮತ್ತೆ ಮತ್ತೆ ಗುಡ್ಡ ಕುಸಿತವಾಗುತ್ತಿದ್ದ ಕ್ಯಾಸಲ್ ರಾಕ್​ದಿಂದ ದೂಧ್​​​ಸಾಗರದವರೆಗೂ ಪ್ರವೇಶ ನಿಷೇಧಿಸಲಾಗಿದೆ. ಕಳೆದ 36 ಗಂಟೆಗಳಿಂದ ರೈಲ್ವೆ ಹಳಿ ಮೇಲಿನ ಗುಡ್ಡ ತೆರವು ಕಾರ್ಯ ಮಾಡಲಾಗುತ್ತಿದ್ದು ನಿರಂತರ ಭೂಕುಸಿತ ರೈಲ್ವೆ ಸಿಬ್ಬಂದಿಗೆ ತಲೆನೋವಾಗಿದೆ.

ಕರ್ನಾಟಕ-ಗೋವಾ ಗಡಿ ಕ್ಯಾಸಲ್ ರಾಕ್​ ಬಳಿ ಮತ್ತೆ ಭೂಕುಸಿತ: ರೈಲು ಸಂಚಾರ ರದ್ದು, ಮಳೆ ಮಧ್ಯೆಯೂ ನಡೆದ ಮಣ್ಣು ತೆರವು ಕಾರ್ಯಚರಣೆ
ಕ್ಯಾಸಲ್ ರಾಕ್
Sahadev Mane
| Updated By: ಆಯೇಷಾ ಬಾನು|

Updated on:Jul 27, 2023 | 9:53 AM

Share

ಬೆಳಗಾವಿ, ಜುಲೈ 27: ಉತ್ತರ ಕನ್ನಡ ಸೇರಿದಂತೆ ರಾಜ್ಯದ ಅನೇಕ ಕಡೆ ಧಾರಾಕಾರ ಮಳೆಯಾಗುತ್ತಿದ್ದು(Monsoon), ಭಾರೀ ಅನಾಹುತಗಳು ಸಂಭವಿಸುತ್ತಿವೆ. ಕರ್ನಾಟಕ-ಗೋವಾ ಗಡಿ ಕ್ಯಾಸಲ್ ರಾಕ್(Castle Rock Dudhsagar) ಪ್ರದೇಶದ ಬಳಿ ಮಂಗಳವಾರ ರಾತ್ರಿ ಗುಡ್ಡ ಕುಸಿತ ಉಂಟಾಗಿತ್ತು. ಈಗ ಮತ್ತೆ ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣದ ಬಳಿ ಮತ್ತೊಂದು ಗುಡ್ಡ ಕುಸಿತವಾಗಿದೆ. ಕಳೆದ 2 ದಿನಗಳಿಂದ ಬೆಳಗಾವಿ-ಗೋವಾ ಮಾರ್ಗ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಕಳೆದ 36 ಗಂಟೆಗಳಿಂದ ರೈಲ್ವೆ ಹಳಿ ಮೇಲಿನ ಗುಡ್ಡ ತೆರವು ಕಾರ್ಯ ಮಾಡಲಾಗುತ್ತಿದ್ದು ನಿರಂತರ ಭೂಕುಸಿತ ರೈಲ್ವೆ ಸಿಬ್ಬಂದಿಗೆ ತಲೆನೋವಾಗಿದೆ.

ಕ್ಯಾಸಲ್ ರಾಕ್​ದಿಂದ ದೂಧ್​​​ಸಾಗರದವರೆಗೂ ಪ್ರವೇಶ ನಿಷೇಧ

ಜು. 25ರ ಮಂಗಳವಾರ ರಾತ್ರಿ ಕ್ಯಾಸಲ್ ರಾಕ್ ಪ್ರದೇಶದ ಬಳಿ ಗುಡ್ಡ ಕುಸಿದಿತ್ತು. ರೈಲು ಹಳಿ ಮೇಲೆಯೇ ಮರದ ಕೊಂಬೆ, ಮಣ್ಣು, ಬಂಡೆ ಕುಸಿದು ಬಿದ್ದಿದೆ. ಹೀಗಾಗಿ ಕಳೆದ 36 ಗಂಟೆಗಳಿಂದ ನೈರುತ್ಯ ರೈಲ್ವೆ ವಲಯದ ಸಿಬ್ಬಂದಿ ರೈಲ್ವೆ ಹಳಿ ಮೇಲಿನ ಗುಡ್ಡ ತೆರವು ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ನಿರಂತರ ಭೂಕುಸಿತವಾಗುತ್ತಿದೆ. ಇದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ. ರೈಲ್ವೆ ಸಿಬ್ಬಂದಿ ಹೊರತುಪಡಿಸಿ ಸಾರ್ವಜನಿಕರಿಗೆ ಕ್ಯಾಸಲ್ ರಾಕ್ ದಿಂದ ದೂಧ್​​​ಸಾಗರದವರೆಗೂ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕಾರ್ಯಾಚರಣೆ ಸ್ಥಳದಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಇಂದು ಕೂಡ ಬೆಳಗಾವಿ ಗೋವಾ ಮಾರ್ಗವಾಗಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಇದನ್ನೂ ಓದಿ: DudhSagar: ದೂಧ್​ ಸಾಗರ್ ಜಲಪಾತದ ವೈಭೋಗಕ್ಕೆ ಪ್ರವಾಸಿಗರು ಫಿದಾ; ಇಲ್ಲಿದೆ ಅದರ ಝಲಕ್

ಸ್ಥಳಕ್ಕೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ಸಂಜೀವ್ ಕಿಶೋರ್ ಭೇಟಿ

ಇನ್ನು ಕಾರ್ಯಾಚರಣೆ ಸ್ಥಳಕ್ಕೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ಸಂಜೀವ್ ಕಿಶೋರ್ ಭೇಟಿ ನೀಡಿ ಮೂರು ಗಂಟೆಗಳ ಕಾಲ ಸ್ಥಳದಲ್ಲಿದ್ದು ಕಾರ್ಯಾಚರಣೆ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ದೂಧ್​​​ಸಾಗರ ಜಲಪಾತ ಸಮೀಪದ ಟನಲ್ ಎದುರೇ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿದಿದೆ. ಭೂಕುಸಿತದ ಪರಿಣಾಮ ಗೋವಾ- ಕರ್ನಾಟಕ ಮಧ್ಯೆ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ. ಮಳೆ ಮಧ್ಯೆಯೇ ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದೇವೆ. ದಿನದ 24 ಗಂಟೆಗಳಿಂದ ನಮ್ಮ ರೈಲ್ವೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 200ಕ್ಕೂ ಅಧಿಕ ಸಿಬ್ಬಂದಿ ಜೊತೆಗೆ ಜೆಸಿಬಿ ಬಳಕೆ ಮಾಡಲಾಗುತ್ತಿದೆ. ಭಾರಿ ಮಳೆ ಆಗುತ್ತಿರುವ ಕಾರಣ ಕಾರ್ಯಾಚರಣೆಗೆ ಸ್ವಲ್ಪ ಅಡ್ಡಿ ಆಗ್ತಿದೆ. ರೈಲು ಹಳಿ ಜೋಡಣೆ ಮಾಡಿ ಆದಷ್ಟು ಬೇಗ ಸಂಚಾರ ಶುರು ಮಾಡಿಸುತ್ತೇವೆ‌. ಕಾರ್ಯಾಚರಣೆ ಯಾವಾಗ ಮುಗಿಯುತ್ತೆ ಅಂತಾ ಹೇಳಲು ಆಗಲ್ಲ. ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ ಹೀಗಾಗಿ ಕ್ಲಿಯರ್ ಆಗಲು ಸಮಯ ತೆಗೆದುಕೊಳ್ಳುತ್ತೆ. ರೈಲ್ವೆ ಸೇವೆ ತಾತ್ಕಾಲಿಕ ಸ್ಥಗಿತದಿಂದ ಪ್ರಯಾಣಿಕರು ಸಹಕಾರ ನೀಡುವಂತೆ ಸಂಜೀವ್ ಕಿಶೋರ್ ಮನವಿ ಮಾಡಿದರು.

ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣದ ಬಳಿ ಮತ್ತೊಂದು ಗುಡ್ಡ ಕುಸಿತ

ಈಗಾಗಲೇ ಕ್ಯಾಸಲ್ ರಾಕ್ ದಿಂದ ನಾಲ್ಕು ಕಿಮೀ ದೂರದಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿದು ಎರಡು ದಿನದಿಂದ ರೈಲ್ವೆ ಸಂಚಾರ ಬಂದ್ ಇದೆ‌. ಈ ನಡುವೆ ಮತ್ತೊಂದು ಕಡೆ ಸ್ವಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಮಳೆ ಮುಂದುವರೆದ ಹಿನ್ನಲ್ಲೆ ಮತ್ತಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:49 am, Thu, 27 July 23