ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ರಾಜಕಾರಣಿ ದಂಪತಿ, ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇವರಿಬ್ಬರನ್ನೂ ಜೈಲಿಗೆ ಹಾಕಿದ್ದನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಖಂಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರತಿಪಕ್ಷಗಳ ನಾಯಕರ ವಿರುದ್ಧ ಸುಳ್ಳು ಕೇಸ್ಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಉದ್ಧವ್ ಠಾಕ್ರೆ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತಿದ್ದಾರೆ. ರಾಣಾ ದಂಪತಿ ಹೇಳಿದ್ದು, ಉದ್ಧವ್ ಠಾಕ್ರೆ ಮನೆಯ ಎದುರು ಕುಳಿತು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದೇ ಹೊರತು ಪ್ರತಿಭಟನೆ ಮಾಡುತ್ತೇವೆ ಎಂದಲ್ಲ. ಅಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದರೆ ಏನಾಗುತ್ತದೆ? ಅದೇನು ಪಾಕಿಸ್ತಾನಕ್ಕೆ ಹೋಗಿ ಮಾಡಬೇಕಾ ಎಂದು ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ. ಹನುಮಾನ್ ಚಾಲೀಸಾ ಪಠಿಸುವುದು ದೇಶ ವಿರೋಧಿ ಎಂದು ಮಹಾರಾಷ್ಟ್ರ ಸರ್ಕಾರ ಭಾವಿಸುವುದಾದರೆ ನಮ್ಮೆಲ್ಲರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಲಿ ಎಂದೂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಅಷ್ಟೇ ಅಲ್ಲ, ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾರನ್ನ ಮುಂಬೈ ಪೊಲೀಸರು ಜೈಲಿನಲ್ಲಿ ಹಿಂಸಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿತ್ತು. ಆದರೆ ಅದರಲ್ಲಿ ಪಾಲ್ಗೊಳ್ಳದೆ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಧ್ವನಿವರ್ಧಕ ವಿವಾದದ ಬಗ್ಗೆ ಚರ್ಚಿಸಲು ಸಭೆ ಕರೆದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಆ ಸಭೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನಿಸುತ್ತದೆ ಎಂದು ಹೇಳಿದರು. ಬಿಜೆಪಿ ನಾಯಕ ಕಿರಿಟ್ ಸೋಮಯ್ಯನವರ ಮೇಲೆ ನಡೆದ ಹಲ್ಲೆಯನ್ನೂ ಇದೇ ವೇಳೆ ಪ್ರಸ್ತಾಪಿಸಿ ಖಂಡಿಸಿದರು.
ಇದನ್ನೂ ಓದಿ: Viral Video: ಬಿಹಾರನ ಸರ್ಕಾರಿ ಶಾಲೆ ಆವರಣದಲ್ಲಿ ಬರ್ತ್ ಡೇ ಪಾರ್ಟಿ; ಗನ್ ಹಿಡಿದು ಡ್ಯಾನ್ಸ್ ಮಾಡಿದ ಯುವಕರು