Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಸಾವಿರ ಕೊರೊನಾ ಕೇಸ್​ ಪತ್ತೆ; ಮತ್ತೆ ಕಾಡಿದ ಲಾಕ್​ಡೌನ್​ ಭಯ

ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 25,833 ಹೊಸ ಕೊರೊನಾ ಪ್ರಕರಣಗಳು ದೃಢವಾಗಿವೆ. 12,764 ಜನರು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. 58 ಸಾವು ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಸಾವಿರ ಕೊರೊನಾ ಕೇಸ್​ ಪತ್ತೆ; ಮತ್ತೆ ಕಾಡಿದ ಲಾಕ್​ಡೌನ್​ ಭಯ
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on: Mar 18, 2021 | 8:55 PM

ಮುಂಬೈ (ಮಾರ್ಚ್​​ 18): ದೇಶದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದೆ. ಆರಂಭದಿಂದಲೂ ಅಧಿಕ ಕೊರೊನಾ ಕೇಸ್​ಗಳು ದಾಖಲಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 25 ಸಾವಿರ ಕೊರೊನಾ ಕೇಸ್​ಗಳು ದಾಖಲಾಗಿವೆ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಮತ್ತೆ ಲಾಕ್​ಡೌನ್​ ಹೇರಿಕೆ ಆಗುವ ಭೀತಿ ಕೂಡ ಕಾಡಿದೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 25,833 ಹೊಸ ಕೊರೊನಾ ಪ್ರಕರಣಗಳು ದೃಢವಾಗಿವೆ. 12,764 ಜನರು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. 58 ಸಾವು ಸಂಭವಿಸಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 23,96,340 ಆಗಿದೆ. 21,75,565 ಜನರು ಈಗಾಗಲೇ ಕೊರೊನಾದಿಂದ ಗುಣಮುಖರಾಗಿದ್ದಾರೆ. 1,66,353 ಆ್ಯಕ್ಟಿವ್​ ಪ್ರಕರಣಗಳಿವೆ. ಸಾವಿನ ಸಂಖ್ಯೆ 53,138 ಆಗಿದೆ.

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಸಾಧ್ಯತೆ.. ಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಮತ್ತೆ ಹೆಚ್ಚಿದೆ. ಇದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಕರಣಗಳು ಹೀಗೆಯೇ ಮುಂದುವರಿದರೆ ಲಾಕ್​ಡೌನ್​ ಘೋಷಣೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಉದ್ಧವ್​ ಠಾಕ್ರೆ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.

ಮಹಾರಾಷ್ಟ್ರದ ಕೊವಿಡ್ ಪರಿಸ್ಥಿತಿ ಗಂಭೀರವಾಗಿದೆ. ದೈನಂದಿನ ಅಂಕಿ ಅಂಶಗಳ ಪ್ರಸ್ತುತ ಏರಿಕೆ ಆತಂಕ ಮೂಡಿಸಿದೆ. ಇದು ಸೋಂಕಿನ ಹೊಸ ಅಲೆಯೇ ಎಂದು ಕಂಡುಹಿಡಿಯಲು ಮತ್ತೊಂದು ಲಾಕ್​​ಡೌನ್ ತಪ್ಪಿಸಲು ಜನರು ಕೊರೊನಾ ವೈರಸ್ ನಿಯಂತ್ರಣ ಶಿಷ್ಟಾಚಾರಗಳನ್ನು ಅನುಸರಿಸಬೇಕೆಂದು ಅವರು ಎಚ್ಚರಿಸಿದ್ದರು. ಲಾಕ್​ಡೌನ್​ ಅಗತ್ಯವಿದೆಯೇ? ನೀವು ಜವಾಬ್ದಾರಿಯುತವಾಗಿ ವರ್ತಿಸಿ. ಲಾಕ್‌ಡೌನ್ ಬೇಡದವರು ಮಾಸ್ಕ್​ ಧರಿಸುತ್ತಾರೆ. ಲಾಕ್‌ಡೌನ್ ಬಯಸುವವರು ಮಾಸ್ಕ್​ ಧರಿಸುವುದಿಲ್ಲ. ಮಾಸ್ಕ್​ ಧರಿಸಿ, ಲಾಕ್​ಡೌನ್​ ಬೇಡವೆನ್ನಿ ಎಂದು ಉದ್ಧವ್​ ಕರೆ ನೀಡಿದ್ದರು.

ಮೋದಿ ಕಿವಿಮಾತು..

ಕೊರೊನಾ ನಿಯಂತ್ರಣದಲ್ಲಿ ನಾವು ಸಾಧಿಸಿರುವ ಮುನ್ನಡೆಯನ್ನು ಬೇಜವಾಬ್ದಾರಿಯಾಗಿ ಬದಲಾಯಿಸುವುದು ಬೇಡ. ಮಾಸ್ಕ್ ಧರಿಸುವುದು ಮತ್ತು ಅಂತರ ಪಾಲಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಆತ್ಮವಿಶ್ವಾಸವು ಅತಿವಿಶ್ವಾಸವಾಗಿ ಅಪಾಯಕಾರಿ ಮಟ್ಟಕ್ಕೆ ಏರುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದರು.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಂಗಳವಾರ ಸಂವಾದ ನಡೆಸಿದ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ಮಾದರಿ ಪರೀಕ್ಷೆಗಳು ಹೆಚ್ಚಾಗಬೇಕು. ಕೆಲ ರಾಜ್ಯಗಳಲ್ಲಿ ದೀಢೀರನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣ ನಗರಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು. ವಿಶ್ವದ ಹಲವು ದೇಶಗಳು ಕೊರೊನಾದ ಹಲವು ಅಲೆಗಳನ್ನು ಎದುರಿಸಬೇಕಾಯಿತು. ನಮ್ಮ ದೇಶದಲ್ಲಿಯೂ, ಕೆಲ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿವೆ. ಈ ಬಗ್ಗೆ ಕೆಲ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಪರೀಕ್ಷೆಯ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ ಎಂದು ಮೋದಿ ಹೇಳಿದ್ದರು.

ಇದನ್ನೂ ಓದಿ: ದೇಶದ ವಿವಿಧೆಡೆ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ