
ಮುಂಬೈ, ಸೆಪ್ಟೆಂಬರ್ 02: ಮಹಾರಾಷ್ಟ್ರ(Maharashtra) ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ 1950 ರ ದಶಕದಿಂದಲೂ ಜಾರಿಯಲ್ಲಿದ್ದ 70 ವರ್ಷಗಳಷ್ಟು ಹಳೆಯ ಕಡ್ಡಾಯ ಹಿಂದಿ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಿ ಅಧಿಕೃತ ಸರ್ಕಾರಿ ನಿರ್ಣಯ ಹೊರಡಿಸಿದೆ.
ಮಹಾರಾಷ್ಟ್ರ ಅಧಿಕೃತ ಭಾಷಾ ಕಾಯ್ದೆಯನ್ವಯ ರಾಜ್ಯದಲ್ಲಿ ಎಲ್ಲಾ ಆಡಳಿತಾತ್ಮಕ ಮತ್ತು ಸಾರ್ವಜನಿಕ ಸೇವಾ ಕೆಲಸಗಳು ಕಡ್ಡಾಯವಾಗಿ ಮರಾಠಿ ಭಾಷೆಯಲ್ಲೇ ನಡೆಯುತ್ತಿರುವುದರಿಂದ, ಸರ್ಕಾರಿ ವ್ಯವಹಾರಗಳಲ್ಲಿ ಹಿಂದಿ ಬಳಕೆಯ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಾಲಕ್ಕೆ ತಕ್ಕ ಬದಲಾವಣೆ: ಮಹಾರಾಷ್ಟ್ರ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬರುವ ಮೊದಲು (ಬಾಂಬೆ ಪ್ರೆಸಿಡೆನ್ಸಿ ಕಾಲದಲ್ಲಿ) ಈ ನಿಯಮ ರೂಪಿಸಲಾಗಿತ್ತು. ಆದರೆ ಪ್ರಸ್ತುತ ರಾಜ್ಯದ ಆಂತರಿಕ ಆಡಳಿತ ಸಂಪೂರ್ಣ ಮರಾಠಿಯಲ್ಲಿದ್ದು, ಕೇಂದ್ರ ಮತ್ತು ಅಂತರರಾಜ್ಯ ವ್ಯವಹಾರಗಳನ್ನು ಇಂಗ್ಲಿಷ್‌ನಲ್ಲಿ ನಿರ್ವಹಿಸಲಾಗುತ್ತಿದೆ. ಹೀಗಾಗಿ ಹಿಂದಿ ಪರೀಕ್ಷೆ ಅಪ್ರಸ್ತುತ ಎಂದು ಸರ್ಕಾರ ತಿಳಿಸಿದೆ.
ಭಾಷಾ ಸಂಘಟನೆಗಳ ವಿರೋಧ: ವರ್ಷಕ್ಕೆ ಎರಡು ಬಾರಿ ನಡೆಯುತ್ತಿದ್ದ ಈ ಪರೀಕ್ಷೆಗೆ ಸುಮಾರು 2000 ದಿಂದ 2,500 ಉದ್ಯೋಗಿಗಳು ಹಾಜರಾಗುತ್ತಿದ್ದರು. ಆದರೆ ಇದನ್ನು ‘ಹಿಂದಿ ಹೇರಿಕೆ’ ಎಂದು ಕರೆದಿದ್ದ ಎಂಎನ್‌ಎಸ್ (MNS), ಶಿವಸೇನೆ (UBT) ಹಾಗೂ ಮರಾಠಿ ಪರ ಸಂಘಟನೆಗಳು ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದವು. ಈ ವಿರೋಧದ ಬೆನ್ನಲ್ಲೇ ಮರಾಠಿ ಭಾಷಾ ಸಚಿವ ಉದಯ್ ಸಮಂತ್ ಅವರು ಪರೀಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಮತ್ತಷ್ಟು ಓದಿ: ಪ್ರಧಾನಿ ಮೋದಿ- ಶರದ್ ಪವಾರ್ ಭೇಟಿ; ಎನ್‌ಡಿಎ ಸೇರಲು ಒಪ್ಪಿತಾ ಎನ್‌ಸಿಪಿ?
ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಪರೀಕ್ಷೆಯ ಬಿಸಿ:
ಸರ್ಕಾರಿ ನೌಕರರಿಗೆ ಹಿಂದಿ ಪರೀಕ್ಷೆ ರದ್ದುಗೊಳಿಸಿದ ಬೆನ್ನಲ್ಲೇ, ಸಾರ್ವಜನಿಕ ಸಾರಿಗೆ ವಲಯದಲ್ಲಿ ಮರಾಠಿ ಕಡ್ಡಾಯಗೊಳಿಸಿರುವ ನಿಯಮ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ನಡೆಸಲಾದ ಮರಾಠಿ ಪ್ರಾವೀಣ್ಯತೆ ಪರೀಕ್ಷೆಯಲ್ಲಿ 7,750 ಆಟೋ ಮತ್ತು ಟ್ಯಾಕ್ಸಿ ಚಾಲಕರು ಫೇಲ್ ಆಗಿದ್ದಾರೆ.
ಗಡುವು ವಿಸ್ತರಣೆ ಇಲ್ಲ: ಮಹಾರಾಷ್ಟ್ರದಲ್ಲಿ ಸುಮಾರು 25,000 ಕ್ಕೂ ಹೆಚ್ಚು ಚಾಲಕರು ಇನ್ನೂ ಮರಾಠಿ ಪ್ರಮಾಣಪತ್ರ ಪಡೆದಿಲ್ಲ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಕಲಿಯಲು ನೀಡಲಾಗಿದ್ದ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಸ್ಪಷ್ಟಪಡಿಸಿದ್ದು, ಅನುತ್ತೀರ್ಣರಾದವರು ಮರುಪರೀಕ್ಷೆ ಬರೆಯಬೇಕಾಗಿದೆ.
ಸ್ಥಳೀಯ ಭಾಷೆಗೆ ಒತ್ತು: ಕರ್ನಾಟಕದಲ್ಲಿ ಕನ್ನಡ ಹಾಗೂ ತಮಿಳುನಾಡಿನಲ್ಲಿ ತಮಿಳಿಗೆ ನೀಡಲಾಗಿರುವ ಆದ್ಯತೆಯಂತೆಯೇ, ಮಹಾರಾಷ್ಟ್ರದಲ್ಲೂ ಸ್ಥಳೀಯ ಆಡಳಿತದಲ್ಲಿ ಪ್ರಾದೇಶಿಕ ಭಾಷೆಯನ್ನು ಬಲಪಡಿಸಲು ಮರಾಠಿ ಭಾಷಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಹಿಂದಿ ಹೇರಿಕೆ ವಿವಾದಗಳಿಗೆ ತೆರೆ: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರದ ವಿರುದ್ಧ ದಕ್ಷಿಣ ಭಾರತ ಸೇರಿದಂತೆ ಮಹಾರಾಷ್ಟ್ರದಲ್ಲೂ ಭಾಷಾ ಸಂಘರ್ಷಗಳು ಮುನ್ನೆಲೆಗೆ ಬಂದಿದ್ದವು. ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವು ಪ್ರಾದೇಶಿಕ ಭಾಷಾ ಅಸ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ