ಕೊವಿಡ್ ಬಂದಾಗಿಂದ ಅಧಿಕಾರದಲ್ಲಿ ಇರುವವರ ತರಹೇವಾರಿ ಹೇಳಿಕೆಗಳು ಅದನ್ನು ಟ್ರೋಲ್ ಮಾಡುವ ಜನ ಕಡಿಮೆ ಆಗಿಲ್ಲ. ಈಗ ಈ ಸಾಲಿಗೆ ಮಹಾರಾಷ್ಟ್ರದ ಜವಳಿ ಸಚಿವ, ಅಸ್ಲಮ್ ಶೇಖ್ ಸೇರಿದ್ದಾರೆ. ಏರುತ್ತಿರುವ ಕೋವಿಡ್ ಸಂಖ್ಯೆಗಳಿಂದಾಗಿ ಮಹಾರಾಷ್ಟ್ರದಲ್ಲಿ ಕೊವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ, ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪದ ಮಧ್ಯೆ ಮಾತನಾಡಿದ ಶೇಖ್, ಈ ಸಮಸ್ಯೆಗೆ ಕಾರಣವೇ ಬೇರೆ ಎಂದು ಹೇಳಿದ್ದಾರೆ. ಹಾಗೆ ಹೇಳಿ ಒಂದು ಸಣ್ಣ ವಿವಾದಕ್ಕೆ ಕಾರಣರಾಗಿದ್ದಾರೆ.
ಅವರು ಹೇಳಿದ್ದೇನು?
ಕೊವಿಡ್ ಲಕ್ಷಣಗಳಿಲ್ಲದಿದ್ದರೂ ಕೆಲವು ಕ್ರಿಕೆಟರ್ಗಳು ಮತ್ತು ಸಿನೆಮಾ ನಟ ನಟಿಯರು ಮಹಾರಾಷ್ಟ್ರದಲ್ಲಿನ ಆಸ್ಪತ್ರೆಯ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರಿಗೆ ತುಂಬಾ ಸಣ್ಣ ಪ್ರಮಾಣದಲ್ಲಿ ಕೊವಿಡ್ ಲಕ್ಷಣವಿದೆ. ಅವರು ಬಂದು ಕೆಲವು ದೊಡ್ಡ ಆಸ್ಪತ್ರೆಯಲ್ಲಿರುವ ಹಾಸಿಗೆಗಳಲ್ಲಿ ಮಲಗಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಈ ರೀತಿ ಮಾಡಿರದಿದ್ದರೆ, ನಿಜವಾಗಿ ಯಾರಿಗೆ ಹಾಸಿಗೆ ಮತ್ತು ಆಸ್ಪತ್ರೆಯ ಅವಶ್ಯಕತೆ ಇದೆಯೋ ಅವರಿಗೆ ಈ ಸೌಲಭ್ಯವನ್ನು ನೀಡಬಹುದಾಗಿತ್ತು ಎಂದು ಶೇಖ್ ಹೇಳಿದ್ದಾರೆ. ಮುಂಬೈಯಲ್ಲಿ ಪ್ರತಿದಿನ 10,000 ಜನ ಕೊವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಆ ಮಹಾನಗರವೊಂದರಲ್ಲಿಯೇ 90,000 ಜನ ಸೋಂಕಿನಿಂದ ಬಳಲುತ್ತಿದ್ದಾರೆ.
ಶೇಖ್ ಹೀಗೆ ಹೇಳಲು ಕಾರಣವನ್ನು ಕೊಟ್ಟಿರದಿದ್ದರೂ, ಎಲ್ಲರೂ ಒಂದು ಕಾರಣವನ್ನು ಊಹಿಸುತ್ತಿದ್ದಾರೆ. ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಬಗ್ಗೆಯೇ ಹೇಳಿರಬೇಕೆಂದು. ಕಳೆದ ತಿಂಗಳು ಕೊವಿಡ್ ಪಾಸಿಟಿವ್ ಆಗಿದ್ದ ತೆಂಡೂಲ್ಕರ್ ಕಳೆದ ತಿಂಗಳು ಆಸ್ಪತ್ರೆಗೆ ಸೇರಿದ್ದರು ಮತ್ತು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಈ ಹಿಂದೆ ತೆಂಡೂಲ್ಕರ್ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯನ್ನು ವಿರೋಧಿಸಿದ್ದರು ಎಂಬ ಕಾರಣಕ್ಕೆ ಶಿವಸೇನಾ-ಎನ್ಸಿಪಿ ಅವರ ಮೇಲೆ ಕೆಂಡಾಮಂಡಲವಾಗಿತ್ತು. ಈಗಾಗಲೇ ರಾಜೀನಾಮೆ ಕೊಟ್ಟಿರುವ ಅನಿಲ್ ದೇಶ್ಮುಖ್ ಮತ್ತು ಎನ್ಸಿಪಿಯ ಮುಖ್ಯಸ್ಥ ಶರದ್ ಪವಾರ್ ತೆಂಡೂಲ್ಕರ್ ರಾಜಕೀಯದಿಂದ ದೂರ ಇರಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲ, ದೇಶಮುಖ್ ಒಂದು ಹೆಜ್ಜೆ ಮುಂದೆ ಹೋಗಿ ತೆಂಡೂಲ್ಕರ್ ಅವರ ಆಸ್ತಿ ಬಗ್ಗೆ ವಿಚಾರಣೆ ಮಾಡುವ ಇಚ್ಛೆ ಇದೆ ಎಂದು ಹೇಳಿದ್ದರು. ಈಗ ಅಸ್ಲಮ್ ಈ ಹೇಳಿಕೆ ನೀಡುವ ಮೂಲಕ ತೆಂಡೂಲ್ಕರ್ ಮೇಲಿರುವ ರೇಜಿಗೆ ಕಡಿಮೆ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ:
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ಗೆ ಹೊಟ್ಟೆನೋವು, ಎರಡು ದಿನಗಳ ನಂತರ ನಡೆಯಲಿದೆ ಸರ್ಜರಿ
(Maharashtra textile minister Aslam Shaikh says some celebrities occupied hospital beds in Mumbai despite having mild Covid symptoms)
Published On - 6:46 pm, Tue, 13 April 21