Lakhimpur Kheri Violence: ಲಖಿಂಪುರ ಖೇರಿ ಹಿಂಸಾಚಾರ ಕೇಸ್ನಲ್ಲಿ ಬಂಧಿತರಾದ ಆಶೀಶ್ ಮಿಶ್ರಾಗೆ ಅನಾರೋಗ್ಯ; ಸರ್ಕಾರಿ ಆಸ್ಪತ್ರೆಗೆ ದಾಖಲು
ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿದು, ಹಿಂಸಾಚಾರ ಉಂಟಾಗಿತ್ತು. ಪ್ರತಿಭಟನಾ ನಿರತ ರೈತರ ಮೇಲೆ ಹರಿದಿರುವ ವಾಹನದಲ್ಲಿ ಆಶೀಶ್ ಮಿಶ್ರಾ ಇದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ.
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ(Lakhimpur Kheri Violence)ದಲ್ಲಿ ಬಂಧಿತರಾಗಿರುವ ಆಶೀಶ್ ಮಿಶ್ರಾರಿಗೆ ಅನಾರೋಗ್ಯ ಉಂಟಾಗಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಶೀಶ್ ಮಿಶ್ರಾ (Ashish Mishra) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆಂದು ಹೇಳಲಾಗಿದ್ದು, ಅವರ ರಕ್ತದ ಮಾದರಿ ತಪಾಸಣೆಗಾಗಿ ಕಳಿಸಲಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಜೈಲು ಅಧಿಕಾರಿಗಳೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶೀಶ್ ಮಿಶ್ರಾರನ್ನು ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. ಅವರೀಗ ಶಂಕಿತ ಡೆಂಗ್ಯೂದಿಂದ ಬಳಲುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆಶೀಶ್ ಮಿಶ್ರಾ ಜ್ವರದ ಬಗ್ಗೆ ಮಾಹಿತಿ ನೀಡಿರುವ ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದ ಪೊಲೀಸ್ ಅಧೀಕ್ಷಕ ಪಿಪಿ ಸಿಂಗ್, ಆಶೀಶ್ ಮಿಶ್ರಾಗೆ ಜ್ವರ ಇರುವುದು ನಿಜ. ಆದರೆ ಡೆಂಗ್ಯೂ ಹೌದೋ ಅಲ್ಲವೋ ಗೊತ್ತಾಗುತ್ತಿಲ್ಲ. ಲಕ್ಷಣಗಳು ಡೆಂಗ್ಯೂದಂತೆ ಇವೆ. ರಕ್ತದ ಮಾದರಿಯ ತಪಾಸಣೆ ವರದಿ ಬಂದ ಬಳಿಕವಷ್ಟೇ ನಿಖರವಾಗಿ ಗೊತ್ತಾಗಲಿದೆ ಎಂದಿದ್ದಾರೆ.
ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿದು, ಹಿಂಸಾಚಾರ ಉಂಟಾಗಿತ್ತು. ಅದರಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಹರಿದಿರುವ ವಾಹನದಲ್ಲಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಆಶೀಶ್ ಮಿಶ್ರಾ ವಾಹನದಿಂದ ಇಳಿದು ಓಡುವ ದೃಶ್ಯವೂ ಕಾಣಿಸುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಪೊಲೀಸ್ ಕ್ರೈಂ ಬ್ರ್ಯಾಂಚ್ ಇದುವರೆಗೆ 13 ಮಂದಿಯನ್ನು ಬಂಧಿಸಿದೆ. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆಶೀಶ್ ಮಿಶ್ರಾರನ್ನು ಬಂಧಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.