ಮೈನ್‌ಪುರಿ ಲೋಕಸಭಾ ಉಪಚುನಾವಣೆ: ಮುಲಾಯಂ ಸಿಂಗ್​​ ಹೆಸರಲ್ಲಿ ಅಖಿಲೇಶ್​​ ಮತ ಯಾಚನೆ

| Updated By: ರಶ್ಮಿ ಕಲ್ಲಕಟ್ಟ

Updated on: Nov 28, 2022 | 9:07 PM

ಇದು ನೇತಾಜಿ ಅವರ ಮನೆ, ಅವರ ಪ್ರದೇಶ. ನೇತಾಜಿ ಹೇಗಿದ್ದರೋ ಅವರನ್ನು ಹಾಗೆ ಮಾಡಿದ್ದು ಮೈನ್ ಪುರಿಯ ಜನರು. ಇಲ್ಲಿ ಪ್ರತಿ ಮತವೂ ನೇತಾಜಿ ಹೆಸರಿನಲ್ಲಿರುತ್ತದೆ ಎಂದು ನನಗೆ ಖಾತ್ರಿಯಿದೆ ಎಂದ ಅಖಿಲೇಶ್ ಯಾದವ್.

ಮೈನ್‌ಪುರಿ ಲೋಕಸಭಾ ಉಪಚುನಾವಣೆ: ಮುಲಾಯಂ ಸಿಂಗ್​​ ಹೆಸರಲ್ಲಿ ಅಖಿಲೇಶ್​​ ಮತ ಯಾಚನೆ
ಅಖಿಲೇಶ್ ಯಾದವ್
Follow us on

ಮೈನ್‌ಪುರಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಮೈನ್‌ಪುರಿ ಲೋಕಸಭಾ ಉಪಚುನಾವಣೆಗೆ (Mainpuri Lok Sabha bypoll) ತಮ್ಮ ಪಕ್ಷದ ಉಸ್ತುವಾರಿ ವಹಿಸಿದ್ದು ಪ್ರತಿ ಮೂರ್ನಾಲ್ಕು ಕಿ.ಮೀ.ಗೆ ಸಣ್ಣ ಸಾರ್ವಜನಿಕ ಸಭೆ ನಡೆಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರ ತಂದೆ ಮುಲಾಯಂ ಸಿಂಗ್ ಯಾದವ್ (Mulayam Singh Yadav) ನಿಧನದ ನಂತರ ಸ್ಥಾನ ತೆರವಾಗಿತ್ತು. ಇಲ್ಲಿ ಅಖಿಲೇಶ್ ಯಾದವ್ ಅವರ ಪತ್ನಿ, ಲೋಕಸಭೆಯ ಮಾಜಿ ಸಂಸದೆ ಡಿಂಪಲ್ ಯಾದವ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಉದ್ದದ ಬೆಂಗಾವಲು ಪಡೆ ಮೈನ್‌ಪುರಿ ಬಳಿಯ ರಾಜ್ಯ ಹೆದ್ದಾರಿಯ ಮೂಲಕ ಸಾಗುತ್ತಿದ್ದಂತೆ, ಪಕ್ಷದ ಬೆಂಬಲಿಗರ ಗುಂಪುಗಳು ನೇತಾಜಿ ಎಂದೇ ಕರೆಯಲ್ಪಡುವ ಮುಲಾಯಂ ಸಿಂಗ್ ಯಾದವ್ ಭಾವಚಿತ್ರಗಳಿಗೆ ಹಾರಗಳನ್ನು ಹಾಕಿದ್ದಾರೆ.
ಒಂದೊಂದು ಸಭೆಯ ನಂತರ ಯಾದವ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಮತ ಕೇಳಿದರು.ಇದು ನೇತಾಜಿ ಅವರ ಮನೆ, ಅವರ ಪ್ರದೇಶ. ನೇತಾಜಿ ಹೇಗಿದ್ದರೋ ಅವರನ್ನು ಹಾಗೆ ಮಾಡಿದ್ದು ಮೈನ್​​ಪುರಿಯ ಜನರು. ಇಲ್ಲಿ ಪ್ರತಿ ಮತವೂ ನೇತಾಜಿ ಹೆಸರಿನಲ್ಲಿರುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿ ಈ ಚುನಾವಣೆಯು ಅವರಿಗೆ ಪ್ರತಿಷ್ಠೆಯ ಯುದ್ಧವೇ ಎಂಬ ಪ್ರಶ್ನೆಗೆ ಅಖಿಲೇಶ್ ಉತ್ತರಿಸಲಿಲ್ಲ. ತೆರವಾದ ಸ್ಥಾನವಾದ ಅಜಂಗಢದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷವು ಬಿಜೆಪಿ ಮುಂದೆ ಸೋತಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ ಧರ್ಮೇಂದ್ರ ಯಾದವ್ ಅವರನ್ನು ಭೋಜ್‌ಪುರಿ ಚಲನಚಿತ್ರ ನಟ ದಿನೇಶ್ ಲಾಲ್ ಯಾದವ್ ಸೋಲಿಸಿದ್ದಾರೆ.
ಅಖಿಲೇಶ್ ಯಾದವ್ ಅವರು ಒಂದು ಬಾರಿಯೂ ಚುನಾವಣಾ ಪ್ರಚಾರ ಮಾಡಲಿಲ್ಲ.

ಮೈನ್‌ಪುರಿಯಲ್ಲಿ 2019ರ ರಾಷ್ಟ್ರೀಯ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಗೆಲುವಿನ ಅಂತರವನ್ನು ಬಿಜೆಪಿ ಒಂದು ಲಕ್ಷಕ್ಕಿಂತ ಕಡಿಮೆ ಮತಗಳಿಗೆ ಇಳಿಸಿತು.ಈ ಬಾರಿ, ಅದರ ದೊಡ್ಡ ನೇತಾರರು ಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಂದು ಮೈನ್‌ಪುರಿಯಲ್ಲಿ ರ್ಯಾಲಿ ನಡೆಸಿದರು.

ಉತ್ತರ ಪ್ರದೇಶದ ಡಿಸಿಎಂ ಕೇಶವ್ ಮೌರ್ಯ ನಿನ್ನೆ ಅಖಿಲೇಶ್ ಯಾದವ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಮೌರ್ಯ, “ನಾವು ನೇತಾಜಿಯನ್ನು ಗೌರವಿಸುತ್ತೇವೆ. ಆದರೆ ಇದು ಅವರ ಹೆಸರಿನ ಚುನಾವಣೆಯಲ್ಲ. ಒಂದು ವೇಳೆ ಹಾಗಿರುತ್ತಿದ್ದರೆ ವರ್ಷಗಳ ಹಿಂದ ಅಖಿಲೇಶ್ ಯಾದವ್ ಅವರು ಅಧಿಕಾರದ ಆಸೆಯಿಂದ ತಮ್ಮ ಸ್ವಂತ ತಂದೆಯನ್ನು ಪಕ್ಷದಿಂದ ಹೊರಹಾಕುತ್ತಿರಲಿಲ್ಲ ಎಂದಿದ್ದಾರೆ.

ಬಿಜೆಪಿ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ ಯಾದವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ಬಿಜೆಪಿ ಸುಳ್ಳುಗಾರರಿಂದ ತುಂಬಿರುವ ಪಕ್ಷ. ಬಿಜೆಪಿಗಿಂತ ಯಾರೂ ಸುಳ್ಳು ಹೇಳುವುದಿಲ್ಲ. ಬಿಜೆಪಿಯ ಯಾವುದೇ ಆರೋಪಗಳಿಗೆ ನಾನು ಉತ್ತರಿಸಲು ಬಯಸುವುದಿಲ್ಲ. ಜನರು ನೇತಾಜಿಯ ಮೇಲಿನ ಗೌರವದಿಂದ ಮತ ಚಲಾಯಿಸಲು ಬಯಸುತ್ತಾರೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸರ್ಕಾರಿ ಅಧಿಕಾರಿಗಳು ಸಮಾಜವಾದಿ ಪಕ್ಷದ ಸದಸ್ಯರಿಗೆ ಏಕೆ ಬೆದರಿಕೆ ಹಾಕುತ್ತಿದ್ದಾರೆ? ಬಿಜೆಪಿಯು ಜನರಿಂದಲ್ಲ. ಆದರೆ ಸರ್ಕಾರಿ ಅಧಿಕಾರಿಗಳಿಂದ ಏಕೆ ಮತ ಕೇಳುತ್ತಿದೆ? ಎಂದು ಅಖಿಲೇಶ್ ಕೇಳಿದ್ದಾರೆ. ಯಾದವ್ ಅವರು ಸರ್ಕಾರ ಮತ್ತು ಪಕ್ಷದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Published On - 8:31 pm, Mon, 28 November 22