ದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿದ್ದ ಅತ್ಯುತ್ತಮ ಕ್ರೀಡಾಪಟುಗಳಿಗೆ ನೀಡುವ ಭಾರತದ ಅತ್ಯುನ್ನತ ಗೌರವದ ಹೆಸರನ್ನು ಭಾರತದ ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಹೆಸರಿಗೆ ಬದಲಿಸಿದ್ದನ್ನು ಧ್ಯಾನ್ ಚಂದ್ ಮೊಮ್ಮಗ ವಿಶಾಲ್ ಸಿಂಗ್ ಸ್ವಾಗತಿಸಿದ್ದಾರೆ. ಇದು ಎಲ್ಲ ಕ್ರೀಡಾ ಸಾಧಕರಿಗೆ ಪ್ರೇರಣೆ ಒದಗಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಧ್ಯಾನ್ ಚಂದ್ ಅವರಿಗೆ ಭಾರತ ರತ್ನ ಪುರಸ್ಕಾರ ಪಡೆಯುವ ಅರ್ಹತೆ ಇದೆ. ಸರ್ಕಾರ ಶೀಘ್ರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕಳೆದ ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರದ ಹೆಸರನ್ನು ಮೇಜರ್ ಧ್ಯಾನ್ ಚಂದ್ ಅವರ ಹೆಸರಿಗೆ ಬದಲಿಸಿದ್ದರು. ದೇಶದ ವಿವಿಧೆಡೆಯಿಂದ ಸಾಕಷ್ಟು ಜನರು ಈ ಕುರಿತು ವಿನಂತಿಗಳನ್ನು ಕಳಿಸಿದ್ದರು. ಅವರ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದೆ ಎಂದು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದರು.
ಧ್ಯಾನ್ ಚಂದ್ ಅವರ ಮಗ ಅಶೋಕ್ ಕುಮಾರ್ ಸಹ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದರು. ಕ್ರೀಡೆಗೆ ಸಂಬಂಧಿಸಿದ ಪುರಸ್ಕಾರಗಳನ್ನು ಕ್ರೀಡಾ ಸಾಧಕರ ಹೆಸರಿನ ಮೇಲೆಯೇ ನೀಡಬೇಕು. ಧ್ಯಾನ್ ಚಂದ್ ಇಡೀ ದೇಶಕ್ಕೆ ಸೇರುತ್ತಾರೆ, ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ. ಈ ಮೊದಲು ಈ ಪುರಸ್ಕಾರವನ್ನು ರಾಜೀವ್ ಗಾಂಧಿ ಅವರ ಹೆಸರಿನ ಮೇಲೆ ಇರಿಸಲಾಗಿತ್ತು, ಅದನ್ನು ಕ್ರೀಡಾ ಸಾಧಕರ ಹೆಸರಿನ ಮೇಲೆ ನೀಡಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ನಮ್ಮ ದೇಶ ಮತ್ತು ನಮ್ಮ ಪ್ರಧಾನಿ ಈ ಬಗ್ಗೆ ಗಮನ ಹರಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ. ದೇಶದಲ್ಲಿ ಹಾಕಿಯ ಜನಪ್ರಿಯೂ ಇದರಿಂದ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಕ್ರೀಡಾ ಪುರಸ್ಕಾರದ ಹೆಸರು ಬದಲಾವಣೆಯನ್ನು ಕಾಂಗ್ರೆಸ್ ಸ್ವಾಗತಿಸಿದೆ. ಆದರೆ ಸರ್ಕಾರವು ಕಣ್ಣೊರೆಸುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ‘ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವನ್ನು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಹೆಸರಿಗೆ ಬದಲಿಸಿರುವುದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ತಮ್ಮ ಕಣ್ಣೊರೆಸುವ ರಾಜಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇಜರ್ ಧ್ಯಾನ್ ಚಂದ್ ಅವರಂಥವರ ಹೆಸರುಗಳನ್ನು ಬಳಸಿಕೊಳ್ಳಬಾರದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
‘ಇದೀಗ ಹೊಸ ವಿದ್ಯಮಾನಕ್ಕೆ ಮೋದಿ ಮುನ್ನುಡಿ ಬರೆದಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣ ಮತ್ತು ಅರುಣ್ ಜೇಟ್ಲಿ ಕ್ರೀಡಾಂಗಣಗಳನ್ನು ಕ್ರೀಡಾ ದಂತಕತೆಗಳಾದ ಮಿಲ್ಖಾ ಸಿಂಗ್, ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ಲಿಯಾಂಡರ್ ಪೇಸ್, ಪಿ.ಟಿ.ಉಷಾ, ಮೇರಿ ಕೋಮ್, ಅಭಿನವ್ ಭಿಂದ್ರಾ ಮತ್ತಿತರರ ಹೆಸರು ಇರಿಸಲು ಮುಂದಾಗಬಹುದು’ ಎಂದು ಅವರು ಲೇವಡಿ ಮಾಡಿ ಮಾಡಿದ್ದಾರೆ.
(Major Dhyan Chands grandson welcomes move to rename Rajiv Gandhi Khel Ratna award tells it will encourage sportspersons)
ಇದನ್ನೂ ಓದಿ: ದ್ವೇಷದ ರಾಜಕಾರಣ ಕೈಬಿಡಿ; ಧ್ಯಾನ್ಚಂದ್ ವಿವಿ ಆರಂಭಿಸಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ: ಡಿಕೆ ಶಿವಕುಮಾರ್ ಆಗ್ರಹ
Published On - 6:08 pm, Sun, 8 August 21