ಈ ಕೇಸ್ ನನ್ನ ಬದುಕನ್ನೇ ಹಾಳು ಮಾಡಿತು; ಮಾಲೆಗಾಂವ್ ಸ್ಫೋಟದ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಮೊದಲ ಪ್ರತಿಕ್ರಿಯೆ

2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿ 7 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಜ್ಞಾ, ನ್ಯಾಯಮೂರ್ತಿಗಳ ಮುಂದೆ "ಈ ಪ್ರಕರಣ ನನ್ನ ಜೀವನವನ್ನು ಹಾಳುಮಾಡಿತು. ಕೇಸರಿಯನ್ನು ಅವಮಾನಿಸಿದರವರಿಗೆ ದೇವರೇ ಶಿಕ್ಷೆ ನೀಡುತ್ತಾನೆ" ಎಂದು ಹೇಳಿದ್ದಾರೆ.

ಈ ಕೇಸ್ ನನ್ನ ಬದುಕನ್ನೇ ಹಾಳು ಮಾಡಿತು; ಮಾಲೆಗಾಂವ್ ಸ್ಫೋಟದ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಮೊದಲ ಪ್ರತಿಕ್ರಿಯೆ
Pragya Thakur

Updated on: Jul 31, 2025 | 4:10 PM

ಮುಂಬೈ, ಜುಲೈ 31: 6 ಜೀವಗಳನ್ನು ಬಲಿ ತೆಗೆದುಕೊಂಡ ಸ್ಫೋಟದಲ್ಲಿ ಬಳಸಲಾಗಿದೆ ಎನ್ನಲಾದ ಬೈಕ್ ಪ್ರಜ್ಞಾ ಠಾಕೂರ್ (Pragya Thakur) ಅವರದ್ದೇ ಎಂದು ನಿರೂಪಿಸಲು ಯಾವುದೇ ಪುರಾವೆಗಳಿಲ್ಲ ಎಂದು ಮುಂಬೈ ನ್ಯಾಯಾಲಯ (Mumbai Court) ಹೇಳಿದೆ. ಇದೇ ಕಾರಣ ನೀಡಿ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ (Malegaon Blast case) ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಇಂದು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಯಿತು. ಸ್ಫೋಟ ಸಂಭವಿಸಿದೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಿದ್ದರೂ ಪ್ರಜ್ಞಾ ಠಾಕೂರ್ ಅವರಿಗೆ ಸೇರಿದೆ ಎಂದು ಹೇಳಲಾದ ಎಲ್‌ಎಂಎಲ್ ಫ್ರೀಡಂ ಬೈಕ್​‌ನಲ್ಲಿ ಸ್ಫೋಟಕವನ್ನು ಅಳವಡಿಸಲಾಗಿದೆ ಎಂದುಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಈ ವೇಳೆ ನ್ಯಾಯಮೂರ್ತಿಗಳ ಮುಂದೆ ಪ್ರಜ್ಞಾ ಠಾಕೂರ್ “ಈ ಕೇಸಿನಿಂದ ನನ್ನ ಜೀವನವೇ ಹಾಳಾಯಿತು” ಎಂದು ಹೇಳಿದ್ದಾರೆ.

“ಬೈಕ್​‌ನ ಚಾಸಿಸ್ ಸಂಖ್ಯೆಯನ್ನು ಅಳಿಸಿಹಾಕಲಾಗಿದೆ ಮತ್ತು ಎಂಜಿನ್ ಸಂಖ್ಯೆಯ ಬಗ್ಗೆಯೂ ಅನುಮಾನವಿದೆ. ಸಾಧ್ವಿ ಪ್ರಜ್ಞಾ ಠಾಕೂರ್ ಅದರ ಮಾಲೀಕರು ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ. ಅವರು ವಾಹನವನ್ನು ಹೊಂದಿದ್ದರು ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ. ದೇಶದ ದೀರ್ಘ ಭಯೋತ್ಪಾದನಾ ವಿಚಾರಣೆಗಳಲ್ಲಿ ಒಂದಾದ ಈ ಪ್ರಕರಣದಲ್ಲಿ ಇಂದು ಪ್ರಜ್ಞಾ ಅವರನ್ನು ಖುಲಾಸೆಗೊಳಿಸಲಾಗಿದೆ.

ಇದನ್ನೂ ಓದಿ: ವಿದೇಶಿ ಮಹಿಳೆಗೆ ಜನಿಸಿದವ ಎಂದೂ ದೇಶಭಕ್ತನಾಗಲು ಸಾಧ್ಯವಿಲ್ಲ, ರಾಹುಲ್​ ಗಾಂಧಿಯನ್ನು ಭಾರತದಿಂದ ಹೊರಹಾಕಬೇಕು: ಪ್ರಜ್ಞಾ ಠಾಕೂರ್

ಇಂದಿನ ತೀರ್ಪು ಮಧ್ಯಪ್ರದೇಶದ ಆಯುರ್ವೇದ ವೈದ್ಯರ ಪುತ್ರಿ ಪ್ರಜ್ಞಾ ಠಾಕೂರ್ ಅವರ 17 ವರ್ಷಗಳ ಕಾನೂನು ಹೋರಾಟವನ್ನು ಅಂತ್ಯಗೊಳಿಸಿತು. 2006ರ ಮುಂಬೈ ರೈಲು ಸ್ಫೋಟಗಳಂತಹ ಭಯೋತ್ಪಾದಕ ದಾಳಿಗಳಿಗೆ ಪ್ರತೀಕಾರವಾಗಿ ಭಯೋತ್ಪಾದಕ ದಾಳಿಗಳನ್ನು ರೂಪಿಸಿದ ಆರೋಪದ ಬಳಿಕ ಪ್ರಜ್ಞಾ ರಾಷ್ಟ್ರೀಯ ಸುದ್ದಿಗಳಲ್ಲಿ ಕಾಣಿಸಿಕೊಂಡರು. ನಂತರ ಅವರನ್ನು “ಹಿಂದೂ ಭಯೋತ್ಪಾದನೆಯ ಮುಖ” ಎಂದು ಕರೆಯಲಾಯಿತು, 2008ರ ಮಾಲೆಗಾಂವ್ ಸ್ಫೋಟದ ನಂತರ ಈ ಪದ ಜನಪ್ರಿಯವಾಯಿತು.


ಇಂದು ತೀರ್ಪು ಪ್ರಕಟವಾದಾಗ ಪ್ರಜ್ಞಾ ಠಾಕೂರ್ ಮತ್ತು ಇತರರು ನ್ಯಾಯಾಲಯದಲ್ಲಿದ್ದರು. ನ್ಯಾಯಾಧೀಶರ ಮುಂದೆ ಮಾತನಾಡಿದ ಪ್ರಜ್ಞಾ, “ತನಿಖೆಗೆ ಯಾರನ್ನಾದರೂ ಕರೆದರೆ ಅದರ ಹಿಂದೆ ಒಂದು ಆಧಾರವಿರಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಆದರೆ, ನನ್ನನ್ನು ಕರೆಸಿ, ಬಂಧಿಸಿ, ಚಿತ್ರಹಿಂಸೆ ನೀಡಲಾಯಿತು. ಇದು ನನ್ನ ಇಡೀ ಜೀವನವನ್ನು ಹಾಳುಮಾಡಿತು. ನಾನು ಋಷಿಯ ಜೀವನವನ್ನು ನಡೆಸುತ್ತಿದ್ದೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು. ಯಾರೂ ನಮ್ಮ ಪಕ್ಕದಲ್ಲಿ ನಿಲ್ಲಲು ಸಿದ್ಧರಿರಲಿಲ್ಲ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ. ಅವರು ಪಿತೂರಿಯ ಮೂಲಕ ಕೇಸರಿಯ ಮಾನಹಾನಿ ಮಾಡಿದ್ದಾರೆ. ಇಂದು ಕೇಸರಿ ಗೆದ್ದಿದೆ, ಹಿಂದುತ್ವ ಗೆದ್ದಿದೆ. ದೇವರು ತಪ್ಪಿತಸ್ಥರನ್ನು ಶಿಕ್ಷಿಸುತ್ತಾನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆಗಳಲ್ಲಿ ಆಯುಧ ಇಟ್ಟುಕೊಳ್ಳುವ ಹಕ್ಕು ನಿಮಗಿದೆ; ಹಿಂದೂಗಳಿಗೆ ಪ್ರಜ್ಞಾ ಸಿಂಗ್ ಠಾಕೂರ್ ಕರೆ

ಈ ಸ್ಫೋಟ ಪ್ರಕರಣದಲ್ಲಿ ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ನಂತರ ಚಿತ್ರಹಿಂಸೆ ನೀಡಲಾಗಿದೆ ಎಂದು ಪ್ರಜ್ಞಾ ಠಾಕೂರ್ ಪದೇ ಪದೇ ಆರೋಪಿಸಿದ್ದಾರೆ. ವಾಸ್ತವವಾಗಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2014ರಲ್ಲಿ ಅವರ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿತು. ಆದರೆ ಅವರ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ. 26/11 ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರಿಗೆ ನಾನು ಶಾಪ ಹಾಕಿದ್ದರಿಂದಲೇ ಅವರು ಪ್ರಾಣ ಕಳೆದುಕೊಂಡರು ಎಂದು ಪ್ರಜ್ಞಾ ಠಾಕೂರ್ 2019ರಲ್ಲಿ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.


“ತನಿಖಾ ತಂಡ ಹೇಮಂತ್ ಕರ್ಕರೆ ಅವರನ್ನು ಕರೆದು ನಿಮ್ಮ ಬಳಿ ಪುರಾವೆಗಳಿಲ್ಲದಿದ್ದರೆ ಅವರನ್ನು ಬಿಟ್ಟುಬಿಡಿ ಎಂದು ಹೇಳಿತು. ಆದರೆ, ನನ್ನ ವಿರುದ್ಧ ಸಾಕ್ಷ್ಯಗಳನ್ನು ಪಡೆಯಲು ಏನು ಬೇಕಾದರೂ ಮಾಡುತ್ತೇನೆ ಎಂದು ಅವರು ಹೇಳಿದರು. ನನ್ನ ವಿರುದ್ಧ ಅವರಿಗೆ ದ್ವೇಷವಿತ್ತು. ಆಗ ಕೋಪದಿಂದ ನಾನು ಅವರಿಗೆ ‘ತೇರಾ ಸರ್ವನಾಶ್ ಹೋಗಾ’ (ನೀನು ಸರ್ವನಾಶವಾಗು) ಎಂದು ಶಾಪ ಹಾಕಿದೆ. ಅದಾದ ಒಂದು ತಿಂಗಳ ನಂತರ ಭಯೋತ್ಪಾದಕರು ಅವರನ್ನು ಕೊಂದರು” ಎಂದು ಪ್ರಜ್ಞಾ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ