ಸಿಎಂ ಸ್ಟಾಲಿನ್ ಭೇಟಿಯಾದ ಕೆಲವೇ ಗಂಟೆಗಳಲ್ಲಿ ಎನ್‌ಡಿಎ ಬಣದಿಂದ ಹೊರಬಂದ ಪನ್ನೀರ್‌ಸೆಲ್ವಂ
ತಮಿಳುನಾಡಿನ ಚುನಾವಣೆಗೂ ಮುನ್ನ ಒ. ಪನ್ನೀರ್‌ಸೆಲ್ವಂ (ಒಪಿಎಸ್) ಎನ್ಡಿಎಯಿಂದ ಹೊರಬಂದಿದ್ದು, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರೊಂದಿಗೆ ಬೆಳಗಿನ ವಾಕಿಂಗ್ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮಿಳುನಾಡು ರಾಜಕೀಯದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಪನ್ನೀರ್‌ಸೆಲ್ವಂ ಅವರ ಬೆಂಬಲಿಗ ಪನ್ರುತಿ ರಾಮಚಂದ್ರನ್ ಈ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪನ್ನೀರ್‌ಸೆಲ್ವಂ ರಾಜ್ಯದ ಹಲವಾರು ಭಾಗಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಚೆನ್ನೈ, ಜುಲೈ 31: ತಮಿಳುನಾಡಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಉಚ್ಚಾಟಿತ ಎಐಎಡಿಎಂಕೆ ನಾಯಕ ಒ. ಪನ್ನೀರ್‌ಸೆಲ್ವಂ ಎನ್ಡಿಎಯಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಇಂದು ಬೆಳಗ್ಗೆ ಸಿಎಂ ಸ್ಟಾಲಿನ್ ಜೊತೆ ಪನ್ನೀರ್‌ಸೆಲ್ವಂ ವಾಕಿಂಗ್ ಹೋಗಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ನಿರ್ಧಾರಕ್ಕೂ ಮುನ್ನ ಇತ್ತೀಚೆಗೆ ತಮಿಳುನಾಡಿನ ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಒಪಿಎಸ್, ಭೇಟಿಗೆ ಅವಕಾಶ ನೀಡಲು ಮನವಿ ಮಾಡಿದ್ದರು. ಆದರೆ, ಒಪಿಎಸ್‌ಗೆ ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ತಿರಸ್ಕಾರದ ನಂತರ, ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ನಿಧಿಯನ್ನು ವಿತರಿಸುವಲ್ಲಿನ ವಿಳಂಬದ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸರ್ಕಾರವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು.
ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಒಪಿಎಸ್ ಅವರ ದೀರ್ಘಕಾಲದ ಆಪ್ತ ಪನ್ರುತಿ ಎಸ್. ರಾಮಚಂದ್ರನ್ ದೃಢಪಡಿಸಿದ್ದಾರೆ. ಅವರು ಈ ಘೋಷಣೆಯನ್ನು ಮಾಡಿದ್ದರು. “ನಾವು ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಮುರಿಯುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಒಪಿಎಸ್ ಶೀಘ್ರದಲ್ಲೇ ರಾಜ್ಯವ್ಯಾಪಿ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಬಂಡಾಯ ಶಾಸಕರಿಂದ ದೂರವೇನೂ ಆಗಿಲ್ಲ, ಮೊನ್ನೆ ಗೋಕಾಕ್ನಲ್ಲಿ ಎಲ್ಲರೂ ಜೊತೆಗಿದ್ದೆವು: ಯತ್ನಾಳ್
ಒಂದು ಕಾಲದಲ್ಲಿ ಎಐಎಡಿಎಂಕೆಯೊಳಗೆ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಎನ್‌ಡಿಎಯಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದ್ದ ಒಪಿಎಸ್, ಎಐಎಡಿಎಂಕೆಯೊಳಗಿನ ಕಹಿ ನಾಯಕತ್ವದ ಜಗಳದ ನಂತರ ತಮ್ಮದೇ ಆದ ಬಣವನ್ನು ರಚಿಸಿಕೊಂಡಿದ್ದರು. ಎನ್‌ಡಿಎಯಿಂದ ಅವರು ನಿರ್ಗಮಿಸಿರುವುದು ಈಗ ರಾಜ್ಯದಲ್ಲಿ ಮತ್ತೊಮ್ಮೆ ಹಳೇ ಪಕ್ಷಗಳ ಪುನರ್ಮಿಲನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2026ರ ತಮಿಳುನಾಡು ಚುನಾವಣೆ ನಡೆಯಲಿದೆ. ಹೀಗಾಗಿ, ಈ ರಾಜಕೀಯ ಬೆಳವಣಿಗೆ ಮಹತ್ವದ್ದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




