ಇನ್ನೆಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಖರ್ಗೆ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿಯೊಬ್ಬ ಭಯೋತ್ಪಾದಕ. ಅವರೊಂದಿಗೆ ಎಐಎಡಿಎಂಕೆ ಯಾಕೆ ಕೈ ಜೋಡಿಸಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ಈ ಹೇಳಿಕೆಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿಕಾರಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ವಿಪಕ್ಷದ ಅಧ್ಯಕ್ಷ ಸ್ಥಾನದ ಘನತೆ ಮರೆತು ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ನವದೆಹಲಿ, ಏಪ್ರಿಲ್ 21: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವುದರಿಂದ ಚೆನ್ನೈನಲ್ಲಿ ಇಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವ ಭರದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಇದಾದ ಬಳಿಕ ತಮ್ಮ ಹೇಳಿಕೆಗೆ ಅವರು ಸ್ಪಷ್ಟನೆ ನೀಡಿದ್ದರೂ ಅದು ವಿವಾದ ಸೃಷ್ಟಿಸಿದೆ. ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖರ್ಗೆಯವರು ಪ್ರಧಾನಿ ಮೋದಿಯವರ ಮತ್ತು ದೇಶದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆಯವರ ಮಾತಿನಲ್ಲಿ ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ಈಗಾಗಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಅವರು ಇನ್ನೂ ಎಷ್ಟು ದಿನ ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ? ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ಅಧ್ಯಕ್ಷರ ಪಾತ್ರವನ್ನು ಮರೆತು ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ದುರಾದೃಷ್ಟ. ಇದಕ್ಕಾಗಿ ಅವರು ಪ್ರಧಾನಿ ಹಾಗೂ ಭಾರತದ ಜನತೆಯ ಕ್ಷಮೆಯಾಚಿಸಬೇಕು” ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
The frustration and desperation are clearly visible. Mallikarjun Kharge and the CONgress party seem to have already conceded defeat.
How long will they continue to mislead the public with such reckless remarks against Prime Minister Narendra Modi? Mallikarjun Kharge with all his… https://t.co/logB5eWjhy
— Pralhad Joshi (@JoshiPralhad) April 21, 2026
ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ
ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವಿಯಾ ಕೂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿ ಕಾರಿದ್ದು, “ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದು, ಎಐಎಡಿಎಂಕೆ ಅವರೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಖರ್ಗೆ ಸಾರ್ವಜನಿಕ ಚರ್ಚೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಎಳೆದಿರುವುದು ಇದೇ ಮೊದಲಲ್ಲ. ಆದರೆ ಈ ಹೇಳಿಕೆಯೊಂದಿಗೆ ಅವರು ತಮ್ಮನ್ನು ಮಾತ್ರ ಕುಗ್ಗಿಸಿಕೊಂಡಿಲ್ಲ, ಇಡೀ ಕಾಂಗ್ರೆಸ್‌ನ ಮನಸ್ಥಿತಿ ಇದೇ ಎಂಬುದನ್ನು ಬಹಿರಂಗಪಡಿಸಿದ್ದಾರೆ” ಎಂದು ಟೀಕಿಸಿದ್ದಾರೆ.
In yet another crass display, Congress Presented Mallikarjun Kharge calls Prime Minister Narendra Modi a “terrorist,” questioning how AIADMK can align with him.
This isn’t the first time Kharge has dragged public discourse to such lows. But with this remark, he hasn’t just… pic.twitter.com/4abaYWYHOq
— Amit Malviya (@amitmalviya) April 21, 2026
ವಿವಾದಕ್ಕೀಡಾದ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಉದ್ದೇಶ ನನಗಿಲ್ಲ. ನಾನು ಆ ಅರ್ಥದಲ್ಲಿ ಮಾತನಾಡಿದ್ದಲ್ಲ. ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಯಾವಾಗಲೂ ಭಯಭೀತಗೊಳಿಸುತ್ತಾರೆ ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು. ಪ್ರಧಾನಿ ಮೋದಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ಅವರು ಭಯೋತ್ಪಾದಕ ಎಂದು ನಾನು ಹೇಳಲಿಲ್ಲ. ಮೋದಿ ಯಾವಾಗಲೂ ಬೆದರಿಕೆ ಹಾಕುತ್ತಾರೆ. ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಅವರು ಗಡಿನಿರ್ಣಯವನ್ನೂ ತಮ್ಮ ಕೈಗೆ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಹೇಳಿದೆನಷ್ಟೇ” ಎಂದು ಸ್ಪಷ್ಟನೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




