ಮಾಲ್​ಗಳು ಗ್ರಾಹಕರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ; ಲುಲು ಮಾಲ್ ಕೇಸ್​ನಲ್ಲಿ ಕೇರಳ ಹೈಕೋರ್ಟ್ ಅಭಿಮತ

| Updated By: ಸುಷ್ಮಾ ಚಕ್ರೆ

Updated on: Jan 15, 2022 | 4:02 PM

ಗ್ರಾಹಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಲ್‌ನ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಚಲನಚಿತ್ರ ನಿರ್ದೇಶಕ, ಅರ್ಜಿದಾರ ಪಾಲಿ ವಡಕ್ಕನ್ ವಾದಿಸಿದ್ದಾರೆ.

ಮಾಲ್​ಗಳು ಗ್ರಾಹಕರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ; ಲುಲು ಮಾಲ್ ಕೇಸ್​ನಲ್ಲಿ ಕೇರಳ ಹೈಕೋರ್ಟ್ ಅಭಿಮತ
ಪ್ರಾತಿನಿಧಿಕ ಚಿತ್ರ
Follow us on

ಕೊಚ್ಚಿ: ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವ ಹಕ್ಕು ಮಾಲ್‌ಗಳಿಗೆ ಇಲ್ಲ ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿರುವ ಕೇರಳ ಹೈಕೋರ್ಟ್ (Kerala High Court), ಎರ್ನಾಕುಲಂನಲ್ಲಿರುವ ಲುಲು ಇಂಟರ್‌ನ್ಯಾಶನಲ್ ಶಾಪಿಂಗ್ ಮಾಲ್‌ಗೆ (Lulu International Shopping Mall) ಕಲಮಸ್ಸೆರಿ ಪುರಸಭೆ ಪರವಾನಗಿ ನೀಡಿದೆಯೇ? ಎಂದು ಪ್ರಶ್ನಿಸಿದೆ. ಕೇರಳ ಹೈಕೋರ್ಟ್​ನ ನ್ಯಾಯಮೂರ್ತಿ ಪಿ.ವಿ ಕುಂಞಿಕೃಷ್ಣನ್ ಮಾಲ್ ಗ್ರಾಹಕರಿಂದ ಕಾನೂನುಬಾಹಿರವಾಗಿ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿದೆ ಎಂಬ ಮನವಿಯನ್ನು ಆಲಿಸಿದ್ದು, “ಕಟ್ಟಡದ ನಿಯಮಗಳ ಪ್ರಕಾರ, ಕಟ್ಟಡವನ್ನು ನಿರ್ಮಿಸಲು ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಅವಶ್ಯಕವಾಗಿದೆ. ಪಾರ್ಕಿಂಗ್ ಸ್ಥಳವು ಕಟ್ಟಡದ ಭಾಗವಾಗಿದೆ. ಪಾರ್ಕಿಂಗ್ ಸ್ಥಳವಿರುತ್ತದೆ ಎಂಬ ಷರತ್ತಿನ ಮೇಲೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿಯನ್ನು ನೀಡಲಾಗುತ್ತದೆ. ಇದರ ಆಧಾರದ ಮೇಲೆ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಕಟ್ಟಡವನ್ನು ನಿರ್ಮಿಸಿದ ನಂತರ, ಕಟ್ಟಡದ ಮಾಲೀಕರು ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಬಹುದೇ? ಎಂಬುದು ಪ್ರಶ್ನೆಯಾಗಿದೆ. ಪ್ರಾಥಮಿಕವಾಗಿ ಮಾಲ್​ ಗ್ರಾಹಕರಿಂದ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಈ ವಿಷಯದ ಬಗ್ಗೆ ತನ್ನ ನಿಲುವಿನ ಬಗ್ಗೆ ಹೇಳಿಕೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಪುರಸಭೆಯನ್ನು ಕೇಳಿದೆ. ಹಾಗೇ, ಮುಂದಿನ ವಿಚಾರಣೆಯನ್ನು ಜನವರಿ 28ಕ್ಕೆ ಮುಂದೂಡಿದೆ. ವಾಹನ ನಿಲುಗಡೆಗಾಗಿ ಕಟ್ಟಡ ಪರವಾನಗಿಯಲ್ಲಿ ನಿಗದಿಪಡಿಸಲಾದ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಪ್ರತಿವಾದಿಯಿಂದ (ಲುಲು ಮಾಲ್) ಪಾರ್ಕಿಂಗ್ ಶುಲ್ಕದ ಹೆಚ್ಚಿನ ಸಂಗ್ರಹವು ಈ ರಿಟ್ ಅರ್ಜಿಯ ಅಂತಿಮ ನಿರ್ಧಾರದ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ. ಆದರೆ ಲುಲು ಮಾಲ್ ತಮ್ಮ ರಿಸ್ಕ್ ಮೇಲೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಬಹುದು ಎಂದು ಸ್ಪಷ್ಟಪಡಿವುದಾಗಿ ನ್ಯಾಯಾಲಯ ಹೇಳಿದೆ.

ಗ್ರಾಹಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಲ್‌ನ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಚಲನಚಿತ್ರ ನಿರ್ದೇಶಕ, ಅರ್ಜಿದಾರ ಪಾಲಿ ವಡಕ್ಕನ್ ವಾದಿಸಿದ್ದಾರೆ. ವಡಕ್ಕನ್ ಡಿಸೆಂಬರ್ 2ರಂದು ಮಾಲ್‌ಗೆ ಭೇಟಿ ನೀಡಿದಾಗ ಅವರಿಂದ 20 ರೂ. ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಿದ್ದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಪಾರ್ಕಿಂಗ್ ಮೊತ್ತವನ್ನು ಪಾವತಿಸಲು ನಿರಾಕರಿಸಿದಾಗ ಮಾಲ್ ಸಿಬ್ಬಂದಿ ನಿರ್ಗಮನ ಗೇಟ್‌ಗಳನ್ನು ಮುಚ್ಚಿ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದ್ದಾರೆ.

“ವಾಣಿಜ್ಯ ಸಂಕೀರ್ಣದಲ್ಲಿನ ಪಾರ್ಕಿಂಗ್ ಪ್ರದೇಶವು ಆ ವಾಣಿಜ್ಯ ಸಂಕೀರ್ಣಕ್ಕೆ ಭೇಟಿ ನೀಡುವ ಗ್ರಾಹಕರ ಉದ್ದೇಶಕ್ಕಾಗಿ ಉದ್ದೇಶಿಸಲಾದ ಸಾರ್ವಜನಿಕ ಸ್ಥಳವಾಗಿದೆ. 1ನೇ ಪ್ರತಿವಾದಿ (ಲುಲು) ಯಾವುದೇ ರೀತಿಯಲ್ಲಿ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಲು ಸಾಧ್ಯವಿಲ್ಲ” ಎಂದು ವಕೀಲರು ವಾದಿಸಿದ್ದಾರೆ. ಆದರೆ, ಈ ವಾದವನ್ನು ಲುಲು ಮಾಲ್ ಪರ ವಕೀಲರು ವಿರೋಧಿಸಿದ್ದು, ಮಾಲ್‌ಗೆ ಪರವಾನಗಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bangalore Covid Cases: ಕೊವಿಡ್ ನಿಯಮಗಳನ್ನು ಅನುಸರಿಸದ ಬೆಂಗಳೂರಿನ ಗರುಡಾ ಮಾಲ್​ಗೆ 20,000 ರೂ. ದಂಡ

ಕೇರಳದಲ್ಲಿ ಡಿಸೆಂಬರ್ 30ರಿಂದ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ, ತಡರಾತ್ರಿ ಹೊಸವರ್ಷಾಚರಣೆಗೆ ನಿಷೇಧ

Published On - 4:01 pm, Sat, 15 January 22