ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ, ಮಮತಾ ಬ್ಯಾನರ್ಜಿ ಹತ್ಯೆ ಮಾಡಿಸಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಸುಬ್ರತಾ ಮುಖರ್ಜಿಗೆ ಬಿಜೆಪಿ ನಾಯಕ ದಿಲೀಪ್ ಘೋಷ್ ತಿರುಗೇಟು ನೀಡಿದ್ದಾರೆ. ಇಂದು ಭಾಂಗಾರ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಮತಕ್ಕಾಗಿ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳ ಜನರು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತಿಲ್ಲ. ಯಾವ ಮನುಷ್ಯ ಎಲ್ಲ ರೀತಿಯ ಸಹಕಾರವನ್ನು ಕಳೆದುಕೊಳ್ಳುತ್ತಾನೋ. ಅವನು ಎಲ್ಲರ ಕರುಣೆ, ಅನುಕಂಪ ಗಳಿಸಿಕೊಳ್ಳಲು ಹಾತೊರೆಯುತ್ತಾನೆ. ಅದೇ ಕೆಲಸವನ್ನು ಇದೀಗ ಮಮತಾ ಬ್ಯಾನರ್ಜಿ ಮಾಡುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ನಾನು ಜೈಲಿಗೆ ಹೋಗಲೂ ಸಿದ್ಧ ಎಂದು ಘೋಷಿಸಿದರು. ಈ ಚುನಾವಣೆಯ ನಂತರ ತಾನು ಜೈಲಿಗೆ ಹೋಗೋದು ನಿಶ್ಚಿತ ಎಂದು ಗೊತ್ತಿದ್ದೇ ಈ ಮಾತುಗಳನ್ನಾಡುತ್ತಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿದರು.
ಈಗ ಮಮತಾ ಬ್ಯಾನರ್ಜಿ ಹೊಸ ವರಸೆ ಶುರು ಮಾಡಿದ್ದಾರೆ. ತನ್ನನ್ನು ಹತ್ಯೆ ಮಾಡುವ ಸಂಚು ನಡೆಯುತ್ತಿದೆ ಎಂಬ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಯಾರಾದರೂ ಯಾಕೆ ಅವರನ್ನು ಕೊಲ್ಲಬೇಕು? ಸತ್ಯ ಹೇಳಬೇಕೆಂದರೆ, ಅವರ ಟಿಎಂಸಿ ಪಕ್ಷದ ಕಾರ್ಯಕರ್ತರೇ ಉಳಿದವರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಾರ್ನಿಂಗ್ ಕೊಟ್ಟಿದ್ದ ಘೋಷ್
ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ದಿಲೀಪ್ ಘೋಷ್, ಪ್ರತಿಯೊಂದನ್ನೂ ಬಡ್ಡಿ ಸಮೇತ ವಾಪಸ್ ಕೊಡುತ್ತೇವೆ ಎಂದು ಖಡಕ್ ವಾರ್ನ್ ಮಾಡಿದ್ದರು.
‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತರೆ ಮಮತಾ ಬ್ಯಾನರ್ಜಿಯ ಹತ್ಯೆ ಆದೀತು‘