ಮುಂಬೈ: ಯುವ ಪ್ರೇಮಿಗಳ ಪ್ರೀತಿಗೆ ಕುಟುಂಬದವರಿಂದ ವಿರೋಧ ವ್ಯಕ್ತವಾಗಿ ಸಂಬಂಧಗಳೇ ಮುರಿದು ಬಿದ್ದ ಸಾಕಷ್ಟು ಉದಾಹರಣೆಗಳಿದೆ. ಕೆಲವೊಮ್ಮೆ ತಮ್ಮ ಪ್ರೀತಿ ಒಪ್ಪದಿದ್ದಾಗ ಪ್ರೇಮಿಗಳು ತಮ್ಮತಮ್ಮ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟು ಮದುವೆ ಆಗಿರುವುದನ್ನೂ ಸಹ ನೋಡಿದ್ದೇವೆ. ಆದರೆ, ಇಲ್ಲೋರ್ವ ಯುವಕ ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನ ಪ್ರೇಯಸಿಯ ಕುಟುಂಬದವರನ್ನು ಬರ್ಬರವಾಗಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ವರ್ಷದ ಹಿಂದೆ ಮೋಯಿನ್ ಖಾನ್ ಎಂಬಾತನಿಗೆ ಇನ್ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳ ಪರಿಚಯ ಆಗಿತ್ತು. ಪರಿಚಯ ಗೆಳೆತನಕ್ಕೆ ತಿರುಗಿ ನಂತರ ಪ್ರೀತಿಯಾಗಿ ಬದಲಾಗಿತ್ತು.ಈ ನಡುವೆ, ಈತ ನನ್ನ ಆಪ್ತ ಗೆಳೆಯ ಎಂದು ಯುವತಿ ಕುಟುಂಬದವರಿಗೆ ಪರಿಚಯ ಮಾಡಿಕೊಟ್ಟಿದ್ದಳು. ಆದರೆ, ಕ್ರಮೇಣ ಇಬ್ಬರೂ ಪ್ರೀತಿಸುತ್ತಿರುವ ವಿಚಾರ ಹುಡುಗಿಯ ಕುಟುಂಬಸ್ಥರಿಗೆ ಗೊತ್ತಾಯಿತು. ಇಬ್ಬರ ಧರ್ಮ ಬೇರೆ ಬೇರೆ. ಹೀಗಾಗಿ, ಆತನನ್ನು ಮದುವೆ ಆಗಲು ಒಪ್ಪಿಗೆ ನೀಡದ ಯುವತಿಯ ಕುಟುಂಬದವರು ಆಕೆಯ ಮೊಬೈಲ್ ಕಸಿದು, ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದ್ದರು.
ಇದರಿಂದ ಸಿಟ್ಟಾದ ಮೋಯಿನ್, ಪ್ರೀತಿಸಿದಾಕೆಯ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ, ಯುವತಿಯ ಅಜ್ಜಿ ಮದುವೆಗೆ ಒಪ್ಪದಿದ್ದಾಗ, ಆಕೆಯನ್ನು ಹತ್ಯೆ ಮಾಡಿದ್ದಾನೆ. ಈ ವೇಳೆ, ಅಜ್ಜಿಯನ್ನು ರಕ್ಷಿಸಲು ಬಂದ ಯುವತಿಯ ತಮ್ಮನನ್ನು ಕೂಡ ಕೊಲೆಗೈದಿದ್ದಾನೆ.
ಆತ್ಮಹತ್ಯೆಗೆ ಶರಣಾದ ಮೋಯಿನ್
ಇಬ್ಬರನ್ನು ಕೊಲೆ ಮಾಡಿದ ನಂತರ ಮೋಯಿನ್ಗೆ ತನ್ನ ತಪ್ಪಿನ ಅರಿವಾಗಿದೆ. ಅಲ್ಲದೆ, ತಾನು ಪೊಲೀಸರಿಗೆ ಸಿಕ್ಕಿ ಬೀಳೋದು ಖಚಿತ ಅನ್ನೋದು ಸಹ ಗೊತ್ತಾಗಿದೆ. ಹೀಗಾಗಿ, ಮೋಯಿನ್ ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.