Manik Saha: ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಾಹಾ ನೇಮಕ; ಶುಭ ಕೋರಿದ ಬಿಪ್ಲಬ್ ದೇಬ್
Tripura Chife Minister: ಮಾಣಿಕ್ ಸಾಹಾ ಅವರು ಕಾಂಗ್ರೆಸ್ ತೊರೆದು 2016ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2020ರಲ್ಲಿ ಅವರು ತ್ರಿಪುರಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದರು. ಇದೀಗ ಅವರು ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದಾರೆ.
ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ (Biplab Kumar Deb) ಸಿಎಂ ಸ್ಥಾನಕ್ಕೆ ಇಂದು ಮಧ್ಯಾಹ್ನ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ತ್ರಿಪುರಾಗೆ ಹೊಸ ಮುಖ್ಯಮಂತ್ರಿಯ ಆಯ್ಕೆಯೂ ಆಗಿದ್ದು, ತ್ರಿಪುರಾದ ಬಿಜೆಪಿ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಮಾಣಿಕ್ ಸಾಹಾ (Manik Saha) ಅವರು ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದಾರೆ.
ಬಿಪ್ಲಬ್ ಕುಮಾರ್ ದೇಬ್ ಅವರು ಇಂದು ಮಧ್ಯಾಹ್ನ ರಾಜೀನಾಮೆ ನೀಡಿದ ನಂತರ ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಈ ಸಭೆಯ ಬಳಿಕ ಮಾಣಿಕ್ ಸಾಹಾ ಅವರನ್ನು ನೂತನ ಸಿಎಂ ಆಗಿ ಘೋಷಿಸಲಾಗಿದೆ. ಬಿಪ್ಲಬ್ ಕುಮಾರ್ ದೇಬ್ ಅವರು ಬಿಜೆಪಿಯ ತ್ರಿಪುರಾ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಮಾಣಿಕ್ ಸಾಹಾ ಯಾರು?: ಮಾಣಿಕ್ ಸಾಹಾ ಅವರು ಕಾಂಗ್ರೆಸ್ ತೊರೆದು 2016ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2020ರಲ್ಲಿ ಅವರು ತ್ರಿಪುರಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದರು. ತ್ರಿಪುರಾದಲ್ಲಿ ನವೆಂಬರ್ 2021ರಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಹದಿಮೂರು ನಾಗರಿಕ ಸಂಸ್ಥೆಗಳಲ್ಲಿ ಬಿಜೆಪಿಯ ಗೆಲುವಿಗೆ ಮಾಣಿಕ್ ಸಾಹಾ ಮುಖ್ಯ ಕಾರಣ. ವೃತ್ತಿಯಲ್ಲಿ ದಂತವೈದ್ಯರಾಗಿದ್ದ ಮಾಣಿಕ್ ಸಾಹಾ ಈ ವರ್ಷದ ಆರಂಭದಲ್ಲಿ ತ್ರಿಪುರಾದಿಂದ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆದ್ದಿದ್ದರು. 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಾಹಾ ಅವರನ್ನು 2020ರಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು.
ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಆಳ್ವಿಕೆಯನ್ನು ಕೊನೆಗೊಳಿಸಿ, 2018ರಲ್ಲಿ ಬಿಜೆಪಿ ಪಕ್ಷವನ್ನು ಅದ್ಭುತ ಗೆಲುವಿನೊಂದಿಗೆ ಅಧಿಕಾರಕ್ಕೆ ತಂದು ಪಕ್ಷವನ್ನು ಮುನ್ನಡೆಸಿದ್ದ ಬಿಪ್ಲಬ್ ಕುಮಾರ್ ದೇಬ್ ಅವರ ರಾಜೀನಾಮೆಯ ಬಳಿಕ ಮಾಣಿಕ್ ಸಾಹಾ ಹೆಸರನ್ನು ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಮಾಣಿಕ್ ಸಾಹಾ ಅವರು ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರುವ ಮೊದಲು, ಹಪಾನಿಯಾದಲ್ಲಿರುವ ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು.
ಮಾಣಿಕ್ ಸಾಹಾ ತ್ರಿಪುರಾದ ಮುಖ್ಯಮಂತ್ರಿಯಾಗಿ ಘೋಷಣೆಯಾಗುತ್ತಿದ್ದಂತೆ ಟ್ವಿಟ್ಟರ್ನಲ್ಲಿ ಮಾಜಿ ಸಿಎಂ ಬಿಪ್ಲಬ್ ದೇಬ್ ತಮ್ಮ ಉತ್ತರಾಧಿಕಾರಿಯನ್ನು ಅಭಿನಂದಿಸಿದ್ದಾರೆ. “ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಣಿಕ್ ಸಾಹಾ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ತ್ರಿಪುರಾ ಅಭಿವೃದ್ಧಿ ಹೊಂದುತ್ತದೆ ಎಂದು ನಾನು ನಂಬುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
Congratulations and best wishes to @DrManikSaha2 ji on being elected as the legislature party leader.
I believe under PM Shri @narendramodi Ji’s vision and leadership Tripura will prosper. pic.twitter.com/s0VF1FznWW
— Biplab Kumar Deb (@BjpBiplab) May 14, 2022
ಬಿಪ್ಲಬ್ ದೇಬ್ ರಾಜೀನಾಮೆ ಬಳಿಕ ಕೇಂದ್ರ ಸಚಿವೆ ಮತ್ತು ಸಂಸದೆ ಪ್ರತಿಮಾ ಭೌಮಿಕ್ ಮತ್ತು ಉಪ ಮುಖ್ಯಮಂತ್ರಿ ಜಿಷ್ಣು ದೇವ್ ಅವರ ಹೆಸರುಗಳು ಸಿಎಂ ಸ್ಥಾನದ ಸಂಭಾವ್ಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದವು. ಇಂದು ಮಧ್ಯಾಹ್ನ ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರಿಗೆ ಸಲ್ಲಿಸಿದ್ದರು. ಇದಾದ ನಂತರ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅಗರ್ತಲಾ ತಲುಪಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Sat, 14 May 22