Tripura CM Resigns: ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ; ಇಂದು ಸಂಜೆ ನೂತನ ಸಿಎಂ ಘೋಷಣೆ
Biplab Kumar Deb: ತ್ರಿಪುರಾದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್ ದೇಬ್ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಇಂದು ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನವದೆಹಲಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ (Biplab Kumar Deb) ಸಿಎಂ ಸ್ಥಾನಕ್ಕೆ ಇಂದು ಶನಿವಾರ ರಾಜೀನಾಮೆ ನೀಡುವ ಮೂಲಕ ತಮ್ಮ ರಾಜ್ಯದ ಜನರಿಗೆ ದೊಡ್ಡ ಶಾಕ್ ನೀಡಿದ್ದಾರೆ. ಬಿಪ್ಲಬ್ ದೇಬ್ ಅವರ ಈ ಅನಿರೀಕ್ಷಿತ ನಡೆಯಿಂದ ತ್ರಿಪುರಾದ ರಾಜಕೀಯದಲ್ಲಿ ಸಂಚಲನ ಉಂಟಾಗಲಿದೆ. ಬಿಪ್ಲಬ್ ದೇಬ್ ಶುಕ್ರವಾರ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಇಂದು ಬೆಳಗ್ಗೆ ಅಗರ್ತಲಾಗೆ ಮರಳಿದ್ದ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಉಳಿದಿರುವಾಗ ತ್ರಿಪುರಾದಲ್ಲಿ (Trpura CM) ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
“ಬಿಪ್ಲಬ್ ದೇಬ್ ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ಇದು ನಮಗೆಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ. ಆದರೆ ನಿಸ್ಸಂಶಯವಾಗಿ ಅವರು ಬಿಜೆಪಿ ಪಕ್ಷದ ನಾಯಕರೊಂದಿಗೆ ದೆಹಲಿಯಲ್ಲಿ ಚರ್ಚೆ ನಡೆಸಿ, ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ನಂಬಿಕೆಯಿದೆ. ಬಿಜೆಪಿ ಪಕ್ಷವು ಕೆಲವು ಯೋಜನೆಗಳನ್ನು ಹೊಂದಿರಬಹುದು. ಅದಕ್ಕಾಗಿಯೇ ಬಿಪ್ಲಬ್ ದೇಬ್ ರಾಜೀನಾಮೆ ನೀಡಿರಬಹುದು ಎಂದು ದೇಬ್ ಅವರ ಸಂಪುಟದ ಸಚಿವರೊಬ್ಬರು ಹೇಳಿದ್ದಾರೆ.
Goodbye & good riddance to the CM who failed thousands of people in #Tripura!
Enough damage done. So much so that even the top bosses at @BJP4India are fed up of his INCOMPETENCE.
Folks at BJP seem very rattled by what @AITCofficial achieved in the state. CHANGE IS INEVITABLE. https://t.co/KtXY5WP2ae
— All India Trinamool Congress (@AITCofficial) May 14, 2022
ತ್ರಿಪುರಾದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಇಂದು ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ನಿರ್ಗಮಿಸುತ್ತಿರುವ ಸಿಎಂ ಬಿಪ್ಲಬ್ ದೇಬ್ ಅವರನ್ನು ಪಕ್ಷದ ಸಂಘಟನಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಸದ್ಯದಲ್ಲೇ ಹೊಸ ಸಿಎಂ ನೇಮಕವಾಗಲಿದೆ ಎಂದು ಮೂಲವೊಂದು ತಿಳಿಸಿದೆ. (Source)
ರಾಜೀನಾಮೆ ನೀಡಿದ ನಂತರ ಮಾತನಾಡಿದ ಬಿಪ್ಲಬ್ ಕುಮಾರ್ ದೇಬ್, “ಬಿಜೆಪಿ ಪಕ್ಷ ಎಲ್ಲರಿಗಿಂತ, ಎಲ್ಲದಕ್ಕಿಂತ ಮೇಲಿದೆ. ನಾನು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ನಿರ್ದೇಶನದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ತ್ರಿಪುರಾದ ಜನರಿಗೆ ನ್ಯಾಯವನ್ನು ನೀಡಲು ಪ್ರಯತ್ನಿಸಿದೆ. ಪಕ್ಷದ ನಾಯಕ ಮತ್ತು ಸಿಎಂ ಆಗಿ ನಾನು ತ್ರಿಪುರಾದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಕೋವಿಡ್ ಬಿಕ್ಕಟ್ಟಿನಿಂದ ರಾಜ್ಯವನ್ನು ಹೊರತರಲು ಪ್ರಯತ್ನಿಸಿದ್ದೇನೆ” ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಸಮಯದ ಚೌಕಟ್ಟು ಇದೆ, ನಾವು ಆ ಸಮಯದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಸಿಎಂ ಅಥವಾ ಇನ್ನಾವುದೇ ಹುದ್ದೆಯಾಗಿರಲಿ ನನ್ನನ್ನು ಎಲ್ಲಿಗೆ ಕಳುಹಿಸಿದರೂ ಎಲ್ಲ ಕಡೆಗೂ ಹೊಂದಿಕೊಂಡು ಕೆಲಸ ಮಾಡುತ್ತೇನೆ ಎಂದು ಬಿಪ್ಲಬ್ ದೇಬ್ ಹೇಳಿದ್ದಾರೆ.
ಬಿಪ್ಲಬ್ ಕುಮಾರ್ ದೇಬ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮರುದಿನವೇ ರಾಜೀನಾಮೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ ಅವರ ರಾಜೀನಾಮೆಗೆ ಬಿಜೆಪಿ ನಾಯಕರೇ ಸೂಚಿಸಿದ್ದರು ಎನ್ನಲಾಗಿದೆ.
ಮುಂದೆ ಏನು?: ಬಿಜೆಪಿಯ ಶಾಸಕರ ಸಭೆಯಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ಮಾಡಲಾಗಿದೆ. ಇಂದು ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿ ಘೋಷಣೆಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Sat, 14 May 22