Viral News: ಬರೋಬ್ಬರಿ 30 ವರ್ಷ ಗಂಡಿನ ವೇಷದಲ್ಲಿ ಬದುಕಿದ ತಮಿಳುನಾಡಿನ ಮಹಿಳೆ!; ಕಾರಣವೇನು ಗೊತ್ತಾ?
30 ವರ್ಷಗಳ ಕಾಲ ಮುತ್ತು ಎಂಬ ಹೆಸರಿನಲ್ಲಿ ಬದುಕಿದ್ದ ಪೇಚಿಯಮ್ಮಾಳ್ ಎಂಬ ಮಹಿಳೆ 3 ದಶಕಗಳ ಕಾಲ ಗಂಡಾಗಿ ಬದುಕಲು ಕಾರಣವೇನೆಂದು ತಿಳಿದರೆ ಅಚ್ಚರಿ ಪಡುತ್ತೀರ.
ಚೆನ್ನೈ: ತಾಯಿಗಿಂತ ದೊಡ್ಡ ದೇವರಿಲ್ಲ ಎಂದು ಹೇಳುವುದು ಸುಮ್ಮನೇ ಅಲ್ಲ. ತಾಯಿ (Mother) ತನ್ನ ಮಕ್ಕಳಿಗಾಗಿ ಯಾವ ಕಷ್ಟವನ್ನು ಬೇಕಾದರೂ ಅನುಭವಿಸಲು ಸಿದ್ಧಳಿರುತ್ತಾಳೆ. ಗಂಡನಿಲ್ಲದೆ ಏಕಾಂಗಿಯಾಗಿ ಮಹಿಳೆಗೆ ಹೆಣ್ಣು ಮಕ್ಕಳನ್ನು ಬೆಳೆಸುವುದು ಸುಲಭದ ವಿಷಯವಲ್ಲ. ಹೀಗಾಗಿ, ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಮಗಳನ್ನು ಒಂಟಿಯಾಗಿ ಬೆಳೆಸಲು 30 ವರ್ಷಗಳ ಕಾಲ ಪುರುಷನ ವೇಷ ಧರಿಸಿದ್ದರು! ಬರೋಬ್ಬರಿ 3 ದಶಕಗಳ ಕಾಲ ಗಂಡಿನ ವೇಷದಲ್ಲಿದ್ದ ಮಹಿಳೆ ಏಕಾಂಗಿಯಾಗಿಯೇ ದುಡಿದು ಮಗಳನ್ನು ಬೆಳೆಸಿದ್ದಾರೆ.
ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಾಳ್ ಅವರಿಗೆ ಮದುವೆಯಾಗಿತ್ತು. ಆದರೆ, ಮದುವೆಯಾದ 15 ದಿನಗಳಲ್ಲೇ ಅವರ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಷ್ಟರಲ್ಲಾಗಲೇ ಅವರ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿತ್ತು. ಗಂಡನನ್ನು ಕಳೆದುಕೊಂಡ 9 ತಿಂಗಳಲ್ಲೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಪೇಚಿಯಮ್ಮಾಳ್ ತನ್ನ ಮಗುವನ್ನು ಬೆಳೆಸಲು ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ, ಗಂಡನಿಲ್ಲದ ಆಕೆಯ ಮೇಲೆ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಬಹಳ ಕಿರುಕುಳ ನೀಡುತ್ತಿದ್ದರು. ಮರುಮದುವೆ ಆದರೆ ತನ್ನ ಗಂಡನಾಗಿ ಬರುವವನು ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಆಕೆ ತನ್ನ ಒಬ್ಬಳೇ ಮಗಳನ್ನು ಸಾಕಲು ಗಂಡಿನ ವೇಷ ಹಾಕಲು ನಿರ್ಧರಿಸಿದರು. ಮಗಳಿಗೆ ಉತ್ತಮ ಭವಿಷ್ಯ ನೀಡಲು ಪೇಚಿಯಮ್ಮಾಳ್ ತನ್ನ ಹೆಸರು ಮತ್ತು ವೇಷವನ್ನು ಬದಲಾಯಿಸಿಕೊಂಡು ಮುತ್ತು ಆದರು. (Source)
ಕೆಲವು ಸಮಯ ಕೆಲಸಕ್ಕಾಗಿ ಅಲೆದಾಡಿ, ಕಿರುಕುಳವನ್ನು ಅನುಭವಿಸಿದ ಪೇಚಿಯಮ್ಮಾಳ್ ತಮ್ಮ 26ನೇ ವಯಸ್ಸಿನಲ್ಲೇ ತನ್ನ ಕೂದಲನ್ನು ಗಂಡಿನಂತೆ ಕಟ್ ಮಾಡಿಕೊಂಡು, ಲುಂಗಿ ಮತ್ತು ಶರ್ಟ್ ಧರಿಸಿ ಪುರುಷನಂತೆ ಕಾಣಲು ಪ್ರಾರಂಭಿಸಿದರು. ಕಳೆದ ಮೂರು ದಶಕಗಳಲ್ಲಿ ಮುತ್ತು ಅವರು ಚೆನ್ನೈ ಮತ್ತು ತೂತುಕುಡಿಯ ಹೋಟೆಲ್‌ಗಳು, ಟೀ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೆಲಸ ಮಾಡಿದಲ್ಲೆಲ್ಲಾ ಅವರನ್ನು ‘ಅನ್ನಾಚಿ’ (ಪುರುಷನಿಗೆ ಕರೆಯುವ ಹೆಸರು) ಎಂದು ಕರೆಯಲಾಗುತ್ತಿತ್ತು.
ಮುತ್ತು ಅವರು ಪರೋಟಾ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರನ್ನು ನಂತರ ‘ಮುತ್ತು ಮಾಸ್ಟರ್’ ಎಂದು ಕರೆಯಲಾಗುತ್ತಿತ್ತು. ನಾನು ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ 100 ದಿನದ ಕೆಲಸದವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಕಲ್ಪಿಸಿಕೊಡಲು ನಾನು ಪ್ರತಿ ಪೈಸೆಯನ್ನೂ ಉಳಿಸಿದೆ. ಪೇಚಿಯಮ್ಮಾಳ್ ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಮುತ್ತು ಎಂದೇ ಹೆಸರನ್ನು ಬದಲಾಯಿಸಿಕೊಂಡರು.
ಆರಂಭದಲ್ಲಿ ನನಗೆ ಗಂಡಿನಂತೆ ಬದುಕುವುದು ಬಹಳ ಕಷ್ಟವಾಗುತ್ತಿತ್ತು. ಆದರೆ, ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾನು ಗಂಡಾಗಿಯೇ ಬದುಕಲು ನಿರ್ಧರಿಸಿದೆ. ನನ್ನ ಜೀವನೋಪಾಯಕ್ಕಾಗಿ ನಾನು ಹೆಚ್ಚು ಪ್ರಯಾಣಿಸುತ್ತಿದ್ದ ಸಮಯದಲ್ಲಿ ಪುರುಷನ ವೇಷವು ನನ್ನ ಕೆಲಸದ ಸ್ಥಳದಲ್ಲಿ ನನ್ನನ್ನು ಸುರಕ್ಷಿತವಾಗಿರಿಸಿತು. ನನ್ನ ಗುರುತನ್ನು ನಿಜವಾಗಿಸಲು ನಾನು ಯಾವಾಗಲೂ ಬಸ್‌ಗಳಲ್ಲಿ ಪುರುಷರ ಸೀಟ್ನಲ್ಲಿಯೇ ಕುಳಿತುಕೊಂಡು ಪ್ರಯಾಣಿಸುತ್ತಿದ್ದೆ, ಪುರುಷರ ಶೌಚಾಲಯವನ್ನೇ ಬಳಸುತ್ತಿದ್ದೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಿದ್ದರೂ ನಾನು ಟಿಕೆಟ್ ಹಣವನ್ನು ಪಾವತಿಸಿ, ಗಂಡಸರ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದೇನೆ ಎಂದು ಪೇಚಿಯಮ್ಮಾಳ್ ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ.
57 ವರ್ಷದ ಪೇಚಿಯಮ್ಮಾಳ್ ಈಗ ನೆಮ್ಮದಿಯಾಗಿದ್ದಾರೆ. ನನ್ನ ಮಗಳು ಮದುವೆಯಾಗಿ, ಖುಷಿಯಾಗಿದ್ದಾಳೆ. ಆಕೆಯ ಎಲ್ಲಾ ಆಸೆಗಳನ್ನು ನಾನು ಪೂರೈಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ಸಾವಿನ ನಂತರವೂ ನಾನು ಹೀಗೆ ಗಂಡಸಿನಂತೆ ಕಷ್ಟಪಟ್ಟು ಬದುಕಿರುವುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಸರ್ಕಾರದಿಂದ ಪಿಂಚಣಿ ಸಿಕ್ಕರೆ ನನ್ನ ಉಳಿದ ಜೀವನವನ್ನು ಕೂಡ ಪುರುಷನಂತೆ ಕಳೆಯುತ್ತೇನೆ ಎಂದು ಅವರು ಹೇಳಿದ್ದಾರೆ.
ಪೇಚಿಯಮ್ಮಾಳ್ ಅವರ ಕಷ್ಟಗಳ ಬಗ್ಗೆ ಒಂದೆರಡು ಜನರಿಗೆ ಮತ್ತು ಅವರ ಮಗಳು ಷಣ್ಮುಗಸುಂದರಿಗೆ ಮಾತ್ರ ತಿಳಿದಿತ್ತು. “ನನ್ನ ಅಮ್ಮ ತನ್ನ ಜೀವನವನ್ನು ನನಗಾಗಿ ಮುಡಿಪಾಗಿಟ್ಟಳು. ಏನೇ ಮಾಡಿದರೂ ಆಕೆಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು” ಎಂದು ಷಣ್ಮುಗಸುಂದರಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Sat, 14 May 22